ಚಿಕ್ಕಮಗಳೂರು: ಹಣ ಡಬಲ್ ಮಾಡುವ ಆನ್ ಲೈನ್ ವಂಚಕರ ಮಾತು ನಂಬಿ ಮಹಿಳೆ 91 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಫೇಸ್ಬುಕ್ ನಲ್ಲಿ ಬಂದ ಜಾಹೀರಾತು ನೋಡಿ ಹಣ ಡಬಲ್ ಮಾಡುವ ಆಸೆಗೆ ಬಿದ್ದ ಮಹಿಳೆ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಗೆ ಹಣ ಹಾಕಿ ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರು ಫೇಸ್ಬುಕ್ ನಲ್ಲಿ ಬಂದ ಜಾಹಿರಾತು ನೋಡಿ ಲಿಂಕ್ ಕ್ಲಿಕ್ ಮಾಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ಕ್ಷಣ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿದ್ದಾರೆ. ಹಣ ಇನ್ವೆಸ್ಟ್ ಮಾಡಿ ಡಬಲ್ ಪಡೆಯಿರಿ ಎಂದು ಕರೆ ಬಂದಿದೆ. ಮಹಿಳೆಗೆ ವಂಚಕರು ತಮ್ಮ ಕಂಪನಿಯ ಮೂಲಕ ಹಣ ಹಾಕಿ ಡಬಲ್ ಪಡೆಯಿರಿ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಹಂತ ಹಂತವಾಗಿ ಹಣ ಕಳಿಸಿದ್ದಾರೆ. ಈ ಮೂಲಕ ಬರೋಬ್ಬರಿ 91 ಲಕ್ಷದ 4315 ಹಣವನ್ನು ವಂಚಕರಿಗೆ ಹಾಕಿ ಮಹಿಳೆ ಕಂಗಾಲಾಗಿದ್ದಾರೆ.
ಡಬಲ್ ಹಣ ಮಾಡುವ ಆಸೆಗೆ ಬಿದ್ದು 91 ಲಕ್ಷ ಹಣ ಕಳೆದುಕೊಂಡ ಮಹಿಳೆ ಇದೀಗ ಹಣ ವಾಪಸ್ ಕೊಡಿಸುವಂತೆ ದೂರು ಸಲ್ಲಿಸಿದ್ದಾರೆ. ವಂಚನೆಯ ಕುರಿತು ಚಿಕ್ಕಮಗಳೂರು ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಿಕ್ಕಮಗಳೂರು ಪೊಲೀಸ್ ಇಲಾಖೆಯು ಆನ್ ಲೈನ್ ವಂಚಕರಿಂದ ದೂರ ಇರುವಂತೆ ಮನವಿ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಬರುವ ಲಿಂಕ್ ಕ್ಲಿಕ್ ಮಾಡದಂತೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮಟೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಹಾಗೂ ಆನ್ಲೈನ್ ವಂಚನೆಯಾಗಿದ್ರೆ ದೂರು ನೀಡುವಂತೆ ತಿಳಿಸಿದ್ದಾರೆ.