ದಾವಣಗೆರೆ : ಪದವಿ ಪೂರೈಸಿ, ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರೂ ಸರ್ಕಾರಿ ಕೆಲಸ ಸಿಗದ ಹಿನ್ನೆಲೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗುಡ್ಡದಲಿಂಗಣ್ಣನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಯುವಕ ಅಂಜಿನಪ್ಪ (26) ನೇಣು ಬಿಗಿದುಕೊಂಡ ಅತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ಅಂಜಿನಪ್ಪ ಪದವಿ ಮುಗಿಸಿದಾಗಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದ. ಅಲ್ಲದೇ ತನ್ನ ರೂಂನಲ್ಲಿ ನಿರಂತರವಾಗಿ ಓದುತ್ತಿದ್ದ. ಆದರೂ ತಾನು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುತ್ತಿಲ್ಲ ಎಂದು ಮನ ನೊಂದಿದ್ದ.
ಅಲ್ಲದೇ, ಕೊಠಡಿಯಲ್ಲಿ ಎಲ್ಲಿ ನೋಡಿದರೂ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳೇ ಇದ್ದವು. ಎಷ್ಟೇ ಪ್ರಯತ್ನ ಪಟ್ಟರೂ ಕೆಲಸ ಸಿಗುತ್ತಿಲ್ಲ ಎಂದು ಸ್ನೇಹಿತರ ಬಳಿ ಆಗಾಗ ಬೇಸರ ತೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಕಳೆದ ರಾತ್ರಿ 7 ಗಂಟೆ ಸುಮಾರಿಗೆ ಮನೆಯ ಮೇಲೆ ಅಂಜಿನಪ್ಪನ ತಾಯಿ ಬಟ್ಟೆ ತೊಳೆದು ಒಣಗಿ ಹಾಕಿದ್ದ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ ಊಟಕ್ಕೆ ಬಂದಿಲ್ಲ ಎಂದು ಮನೆಯವರು ಬಾಗಿಲು ಬಡಿದರೂ ಮಗ ಬಾಗಿಲು ತೆಗೆದಿಲ್ಲ. ಮಲಗಿರಬಹುದೇನೋ ಎಂದು ಭಾವಿಸಿ ಪೋಷಕರು ಸುಮ್ಮನಾಗಿದ್ದರು.
ಬೆಳಗ್ಗೆ ಮತ್ತೆ ಬಾಗಿಲು ತಟ್ಟಿದರೂ ಅಂಜಿನಪ್ಪ ಬಾಗಿಲು ತೆಗೆದಿಲ್ಲ. ನಂತರ ಕಿಟಕಿಯಿಂದ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















