ಮನೆ ಅಪರಾಧ ಆನ್ ಲೈನ್ ಗೇಮ್ ಆ್ಯಪ್ ನಲ್ಲಿ ಲಕ್ಷಾಂತರ ರೂ ಕಳೆದುಕೊಂಡ ಯುವಕ

ಆನ್ ಲೈನ್ ಗೇಮ್ ಆ್ಯಪ್ ನಲ್ಲಿ ಲಕ್ಷಾಂತರ ರೂ ಕಳೆದುಕೊಂಡ ಯುವಕ

0

ರಾಯಚೂರು: ಬೇಗನೆ ಹಣ ಗಳಿಸುವ ಆಸೆಯಿಂದ ಆನ್‌ ಲೈನ್‌ ಗೇಮ್‌ ಆ್ಯಪ್‌ ಗಳ ಸುಳಿಗೆ ಸಿಲುಕಿದ ಯುವಕನೊಬ್ಬ ಲಕ್ಷಾಂತರ ರೂ. ಕಳೆದುಕೊಂಡಿದ್ದು,  ಈಗ ತನಗೆ ವಂಚನೆಯಾಗಿದ್ದು, ಹಣವನ್ನು ಮರಳಿ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾನೆ.

ಲಿಂಗಸುಗೂರು ತಾಲೂಕಿನ ಮುದಗಲ್ಲ ಪಟ್ಟಣದ ನಿವಾಸಿ ಸಹದೇವಪ್ಪ ಹಣ ಕಳೆದುಕೊಂಡವನು. ಆನ್‌ ಲೈನ್‌ ಗೇಮ್‌ ಚಟದಿಂದ ಸುಮಾರು 79 ಲಕ್ಷ ರೂ. ಹಾಗೂ 18 ಎಕರೆ ಜಮೀನನ್ನು ಕಳೆದುಕೊಂಡಿದ್ದಾಗಿ ತಿಳಿಸಿದ್ದಾನೆ.

ಆ್ಯಪ್‌ ಗಳ ಡೀಲರ್‌ ಮೈನುದ್ದೀನ್‌, ಚನ್ನಬಸವ, ರುದ್ರಗೌಡ, ಹನುಮನಗೌಡ ಎನ್ನುವವರಿಂದ ನನಗೆ ವಂಚನೆಯಾಗಿದ್ದು, ಹಣ ಪಡೆದು ಲಾಗಿನ್‌ ಐಡಿ, ಪಾಸ್‌ ವರ್ಡ್‌ ನೀಡುತ್ತಿದ್ದರು ಎಂದು ಆಪಾದಿಸಿದ್ದಾನೆ.

ವಿವಿಧ ಆನ್‌ ಲೈನ್‌ ಬೆಟ್ಟಿಂಗ್‌ ಆ್ಯಪ್‌ ಗಳಾದ ರಮ್ಮಿ, ಕ್ರಿಕೆಟ್‌, ಕ್ಯಾಸಿನೋ ಸಹಿತ ಇತರ ಆಟಗಳಿಗೆ ದುಡ್ಡು ಕಟ್ಟಿದ್ದಾನೆ. ಆ್ಯಪ್‌ಗಳು ಹಾಗೂ ಅವುಗಳ ಡೀಲರ್‌ ಗಳಿಂದ ವಂಚನೆಯಾಗಿದೆ ಎಂದು ಈಗ ಅಲವತ್ತುಕೊಂಡಿದ್ದಾನೆ.

2014ರಿಂದ ಈವರೆಗೆ ಆನ್‌ ಲೈನ್‌ ಗೇಮ್‌ ಗಳ ಮೇಲೆ ಲಕ್ಷಾಂತರ ರೂ. ಸುರಿದ ಯುವಕ ತನಗೆ ನ್ಯಾಯ ಕಲ್ಪಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾನೆ.