ನೆಲಮಂಗಲ : ಯುವತಿಯನ್ನ ಸ್ನೇಹಿತೆ ರೂಂಗೆ ಕರೆದೊಯ್ದು ಯುವಕ ಕೊಲೆಗೈದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ನಡೆದಿದೆ.
ದೇವಿಶ್ರೀ (21) ಮೃತ ಯುವತಿ. ಆಂಧ್ರದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿಯಾಗಿರುವ ದೇವಿಶ್ರೀ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ದೇವಿಶ್ರೀ ಭಾನುವಾರ ಬೆಳಗ್ಗೆ ಪ್ರೇಮ್ ವರ್ಧನ್ ಎಂಬಾತನ ಜೊತೆ ಸ್ನೇಹಿತೆ ರೂಂಗೆ ತೆರಳಿದ್ದಳು. ಅಲ್ಲಿ ಆಕೆಯನ್ನು ಕೊಲೆ ಮಾಡಿ ಯುವಕ ಓರ್ವನೇ ವಾಪಸ್ ಆಗಿದ್ದಾನೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಮೃತ ದೇವಿಶ್ರೀ ರೆಡ್ಡಪ್ಪ, ಜಗದಂಭ ದಂಪತಿಯ ಕೊನೆಯ ಮಗಳು. ಚೆನ್ನಾಗಿ ಓದಲಿ ಅಂತಾ ಪೋಷಕರು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದ್ದರು. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತಲೆಮರೆಸಿಕೊಂಡಿರುವ ಪ್ರೇಮ್ ವರ್ಧನ್‌ಗೆ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಸದ್ಯ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಆಸ್ಪತ್ರೆಯ ಶವಗಾರದ ಮುಂದೆ ಕುಟುಂಬಸ್ಥರು ಸೇರಿದ್ದಾರೆ.
ಈ ಕುರಿತು ದೇವಿಶ್ರೀ ದೊಡ್ಡಮ್ಮ ಮಾತನಾಡಿ, ಮಗಳು ಇಲ್ಲಿಗೆ ಓದಲಿಕ್ಕೆ ಬಂದಿದ್ದಾಳೆ. ಭಾನುವಾರ ಬೆಳಗ್ಗೆ 11 ಗಂಟೆಗೆ ತಂದೆಯೊಂದಿಗೆ ಮಾತಾನಾಡಿದ್ದಾಳೆ. ಆಮೇಲೆ ಕಾಲ್ ಮಾಡಿದ್ರೂ ಫೋನ್ ಪಿಕ್ ಮಾಡಿಲ್ಲ. ಅವಳ ಸ್ನೇಹಿತೆ ಕರೆ ಮಾಡಿ ಅವರ ರೂಂಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಏನಾಗಿದೆ ಗೊತ್ತಿಲ್ಲ. ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ದೇವಿಶ್ರೀ ದೊಡ್ಡಪ್ಪ ಪ್ರತಿಕ್ರಿಯಿಸಿ, ಯುವಕ ರ‍್ಯಾಗಿಂಗ್ ಮಾಡುತ್ತಿದ್ದ ಬಗ್ಗೆ ದೇವಿಶ್ರೀ ಕಾಲೇಜಿಗೆ ಮತ್ತು ಪೋಷಕರಿಗೂ ತಿಳಿಸಿದ್ದಳು. ಮೂರು ತಿಂಗಳ ಹಿಂದೆಯೇ ಯುವಕನ ಉಪಟಳದ ಬಗ್ಗೆ ತಿಳಿಸಿದ್ದಳು. ಕಾಲೇಜಿನವರು ಯಾವುದೇ ಕ್ರಮ ಕೈಗೊಂಡಿಲ್ಲ. ಪೋಷಕರು ಮೂರು ತಿಂಗಳು ಕಾಲೇಜು ಮುಗಿಯುತ್ತೆ ಅಂತಾ ಮಗಳಿಗೆ ಹೇಳಿದ್ದರು ಎಂದು ತಿಳಿಸಿದ್ದಾರೆ.














