ಮನೆ ಅಪರಾಧ ಚಿಕ್ಕಬಳ್ಳಾಪುರದಲ್ಲಿ ಕಲ್ಲಿನಿಂದ ಯುವಕನ ಮುಖ ಜಜ್ಜಿ ಭೀಕರ ಹತ್ಯೆ

ಚಿಕ್ಕಬಳ್ಳಾಪುರದಲ್ಲಿ ಕಲ್ಲಿನಿಂದ ಯುವಕನ ಮುಖ ಜಜ್ಜಿ ಭೀಕರ ಹತ್ಯೆ

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಜನನಿಬಿಡ ಪ್ರದೇಶದಲ್ಲಿ ಕಲ್ಲಿನಿಂದ ಓರ್ವ ಯುವಕನ ಮುಖ ಜಜ್ಜಿ ಮತ್ತು ಮರ್ಮಾಂಗಕ್ಕೆ ಒದ್ದು ಹತ್ಯೆ ಮಾಡಿರುವಂತಹ ಭೀಕರ ಘಟನೆ ನಡೆದಿದೆ.

ನಗರದ ಬಿ.ಬಿ. ರಸ್ತೆಯಲ್ಲಿರುವ ‘ಸುಮ ಆಗ್ರೋ ಸೀಡ್ಸ್’ ಅಂಗಡಿಯ ಮುಂಭಾಗದ ಅಂಡರ್‌ಗ್ರೌಂಡ್ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಯುವಕನನ್ನು ಕಲ್ಲಿನಿಂದ ಮುಖ ಜಜ್ಜಿ ಹಾಗೂ ಮರ್ಮಾಂಗಕ್ಕೆ ಪ್ರಹಾರ ಮಾಡಿ ಹತ್ಯೆ ಮಾಡಲಾಗಿದೆ. ಘಟನೆಯ ಮಾಹಿತಿ ಪಡೆದ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತನನ್ನು ಅಂಬೇಡ್ಕರ್ ನಗರದ ನಿವಾಸಿ ಶ್ರೀಕಾಂತ್ (29) ಎಂದು ಗುರುತಿಸಲಾಗಿದೆ.

ಮೃತ ಶ್ರೀಕಾಂತ್ ಅವರು ತಮ್ಮ ಪತ್ನಿ ಭಾರ್ಗವಿಯೊಂದಿಗೆ ಮೊನ್ನೆ ರಾತ್ರಿ ಮನೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಸಿದ್ದರು ಎನ್ನಲಾಗಿದೆ. ಈ ವಾಗ್ವಾದದಿಂದ ಬೇಸರಗೊಂಡು ಅವರು ರಾತ್ರಿ 10 ಗಂಟೆ ಸುಮಾರಿಗೆ ಮನೆಯಿಂದ ಹೊರಟು ಹೋಗಿದ್ದರು. ನಿನ್ನೆ ಬೆಳಿಗ್ಗೆ ಅವರ ಶವ ಪತ್ತೆಯಾದ ಘಟನೆ ಕುಟುಂಬದಲ್ಲಿ ಆಘಾತ ಹುಟ್ಟಿಸಿದೆ. ಈ ಹತ್ಯೆ ಕುಟುಂಬ ಕಲಹದ ಪರಿಣಾಮವೇನಾ ಎಂಬ ಅನುಮಾನವೂ ಉಂಟಾಗಿದೆ.

ಹತ್ಯೆಯ ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳಿದ್ದು, ಆ ದೃಶ್ಯಗಳಲ್ಲಿ ಓರ್ವ ಪುರುಷ ಮತ್ತು ಮಹಿಳೆ ಸ್ಥಳಕ್ಕೆ ಬಂದು ಹೋಗಿರುವುದು ಸೆರೆಯಾಗಿದೆ. ಈ ದೃಶ್ಯಾಧಾರಗಳ ಮೂಲಕ ಪೊಲೀಸರು ತನಿಖೆಯನ್ನು ಮುಂದುವರಿಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ.

ಮೃತ ಶ್ರೀಕಾಂತ್ ಅವರ ತಾಯಿ ಮೀನಾಕ್ಷಮ್ಮ, “ಮಗನಿಗೆ ಸೊಸೆಯೊಂದಿಗೆ ಕೆಲ ಕಾಲದಿಂದ ಕಲಹ ನಡೆಯುತ್ತಿತ್ತು. ಯಾರು ಹತ್ಯೆ ಮಾಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಅವರಿಬ್ಬರ ನಡುವೆ ಎಲ್ಲವೂ ಸರಿಯಾಗಿರಲಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಸಿಸಿ ಕ್ಯಾಮೆರಾ ದೃಶ್ಯಾಧಾರಗಳ ಆಧಾರದಲ್ಲಿ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಕೊಲೆಯ ಹಿಂದೆ ಇರುವ ಸತ್ಯ ಬಹಿರಂಗವಾಗುವ ನಿರೀಕ್ಷೆ ಇದೆ