ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಶಾಂತಿನಗರದಲ್ಲಿ ಮಾರಕಾಸ್ತ್ರಗಳು ಝಳಪಿಸಿದೆ. ಸ್ನೇಹಿತನ ಜೊತೆ ಟೀ ಕುಡಿಯಲು ಹೋಗಿದ್ದ ಯುವಕನನ್ನ ಮದ್ಯವ್ಯಸನಿ ಯುವಕರು ಬರ್ಬರವಾಗಿ ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 19 ವರ್ಷದ ಯುವಕ ಸಯ್ಯದ್ ಸೂಫಿಯನ್ ಕೊಲೆಯಾಗಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಜಾನೆ 5:40 ಸುಮಾರಿಗೆ ಟೀ ಕುಡಿಯಲು ಹೋಗಿದ್ದ ವೇಳೆ ಮದ್ಯವ್ಯಸನಿ ಯುವಕರು ಸೂಫಿಯಾನ್ ಜೊತೆ ಹೊಡೆದಾಡಿದ್ದಾರೆ. ಇದೇ ವೇಳೆ ಚಾಕುವಿನಿಂದ ಚುಚ್ಚಿದ್ದಾರೆ. ಇಬ್ಬರು ಸ್ನೇಹಿತರು ಸೇರಿ ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ. ಎದೆ ಮತ್ತು ಬೆನ್ನಿನ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾರೆ. ಇದನ್ನು ವೀಕ್ಷಿದ ಜನ ಯಾರೊಬ್ಬರೂ ಸಹಾಯಕ್ಕೆ ಬಾರದ ಹಿನ್ನೆಲೆ ರಸ್ತೆಯಲ್ಲೇ ಯುವಕ ನರಳಿ ಪ್ರಾಣ ಬಿಟ್ಟಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೃತ ಸೂಫಿಯಾನ್ ಪೋಷಕರು, ಗಾಂಜಾ, ಡ್ರಗ್ಸ್ ಸೇವಿಸಿದ್ದ ಯುವಕರು ತಮ್ಮ ಮಗನನ್ನ ಕೊಲೆ ಮಾಡಿರುವುದಾಗಿ ರೋಪಿಸಿದ್ದಾರೆ. ಶಾಂತಿ ನಗರದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಚಿಕ್ಕ ಚಿಕ್ಕ ಮಕ್ಕಳೂ ಡ್ರಗ್ಸ್, ಗಾಂಜಾ, ಟ್ಯಾಬ್ಲೆಟ್ ಹಾಗೂ ಸೆಲ್ಯೂಷನ್ ಸೇವನೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಹುಡುಗರು ನಶೆಯಲ್ಲಿರುತ್ತಾರೆ. ನನ್ನ ಮಗ ಸೂಫಿಯನ್ ಬೆಳಗ್ಗೆ ನಮಾಜ್‌ಗೆ ಹೋಗಿದ್ದ. ನಂತರ ಟೀ ಕುಡಿಯುವಾಗ ಸ್ನೇಹಿತರೇ ಚಾಕು ಹಾಕಿ ಕೊಲೆ ಮಾಡಿದ್ದಾರೆ.
ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ. ಇಲ್ಲವಾದರೆ, ನಮ್ಮನ್ನೂ ಕೊಲೆ ಮಾಡಿ ಎಂದು ಕೊಲೆಯಾದ ಸೂಫಿಯಾನ್ ತಾಯಿ ಶಾಯಿನ್ ತಾಜ್ ಗೋಳಾಡಿದ್ದಾರೆ. ಕೊಲೆಯಾದ ಸೂಫಿಯನ್ ಕಾವೇರಿ ಸಿಲ್ಕ್ ಸ್ಯಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂತ ಪೋಷಕರು ತಿಳಿಸಿದ್ದಾರೆ.














