ಮೈಸೂರು(Mysuru): ವಿವಾಹಿತ ವ್ಯಕ್ತಿಯ ಜೊತೆ ಕಪಿಲಾ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿ.ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದ ಮಣಿ(30), ಮೈಸೂರಿನ ರಮಾಬಾಯಿ ನಗರ ನಿವಾಸಿ ವಸಂತ ಮೃತ ದುರ್ದೈವಿಗಳು.
ಶುಕ್ರವಾರ ರಾತ್ರಿ 12ರ ವೇಳೆ ಬೈಕ್’ನಲ್ಲಿ ಬಂದ ಮಣಿ ಹಾಗೂ ವಸಂತ, ಬೈಕ್ ಅನ್ನು ಕಪಿಲಾ ಸೇತುವೆ ರಸ್ತೆಯಲ್ಲಿಯೇ ನಿಲ್ಲಿಸಿ, ನದಿಗೆ ಹಾರಿದ್ದಾರೆ.
ಬೆಳಗ್ಗೆ ಸೇತುವೆ ಮೇಲೆ ಬೈಕ್ ನಿಂತಿದ್ದನ್ನು ನೋಡಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬೈಕ್ ಬಳಿ ಬಂದಿದ್ದಾರೆ. ಆ ವೇಳೆ ಬೈಕ್ನಲ್ಲಿ ಇಟ್ಟಿದ್ದ ಮೊಬೈಲ್ ರಿಂಗ್ ಆಗಿದೆ. ಕರೆ ಸ್ವೀಕರಿಸಿದ ಪೊಲೀಸರು, ಮಣಿ ಸಂಬಂಧಿಕರಿಂದ ಮಾಹಿತಿ ಪಡೆದಿದ್ದಾರೆ. ಆಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಮಣಿ ಸಂಬಂಧಿಕರು ಸ್ಥಳಕ್ಕಾಗಮಿಸಿದ್ದು, ಮಣಿ ಆತ್ಮಹತ್ಯೆಯನ್ನು ಖಚಿತ ಪಡಿಸಿಕೊಂಡಿದ್ದಾರೆ. ಯುವತಿ ಕಡೆಯವರು ಇನ್ನು ಸ್ಥಳಕ್ಕೆ ಆಗಮಿಸಿಲ್ಲ. ಮೃತ ವಿವಾಹಿತನ ಪೋಷಕರು, ಯುವತಿ ಜೊತೆ ಸಂಬಂಧ ಇರಿಸಿಕೊಂಡಿದ್ದ ಎಂದು ಮಾಹಿತಿ ನೀಡಿದ್ದಾರೆ.
ವಸಂತಳ ಮೃತದೇಹ ಇನ್ನೂ ಪತ್ತೆಯಾಗಿಲ್ಲ, ವಸಂತಳ ಕುಟುಂಬಸ್ಥರಿಂದ ಮಾಹಿತಿ ಕಲೆಹಾಕಿದ ನಂತರವಷ್ಟೇ ಪೊಲೀಸರಿಗೆ ಸತ್ಯಾಂಶ ತಿಳಿಯಲಿದೆ.
ಈ ಸಂಬಂಧ ತಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.