ಮನೆ ರಾಜ್ಯ ʻನನಗೆ ಸನ್ಯಾಸ ಜೀವನ ಬೇಡʼ ಪತ್ರ ಬರೆದಿಟ್ಟು ಮಠ ತೊರೆದ ಕಿರಿಯ ಸ್ವಾಮೀಜಿ

ʻನನಗೆ ಸನ್ಯಾಸ ಜೀವನ ಬೇಡʼ ಪತ್ರ ಬರೆದಿಟ್ಟು ಮಠ ತೊರೆದ ಕಿರಿಯ ಸ್ವಾಮೀಜಿ

0

ಮಾಗಡಿ (Magadi): ʻನನಗೆ ಸನ್ಯಾಸ ಜೀವನ ಬೇಡ, ನಾನು ಮತ್ತೆ ಕಾವಿ ತೊಡಲಾರೆʼ ಎಂದು ಪತ್ರ ಬರೆದಿಟ್ಟು ಸೋಲೂರು ಸಮೀಪದ ಮಹಾಂತೇಶ್ವರ ಗದ್ದಿಗೆ ಮಠದ ಕಿರಿಯ ಶ್ರೀಗಳಾದ ಶಿವ ಮಹಾಂತ ಸ್ವಾಮೀಜಿ ಮಠ ತೊರೆದಿದ್ದಾರೆ.

ಸ್ವಾಮೀಜಿಗಳು ಎರಡು ದಿನಗಳ ಹಿಂದೆಯೇ ಸಿದ್ಧಗಂಗಾ ಮಠ ತೊರೆದಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ. ʻನನಗೆ ಸನ್ಯಾಸ ಜೀವನ ಬೇಡ, ನಾನು ಮತ್ತೆ ಕಾವಿ ತೊಡಲಾರೆ. ನನ್ನನ್ನು ಹುಡುಕುವ ಮತ್ತೆ ಸನ್ಯಾಸ ಜೀವನಕ್ಕೆ ಕರೆ ತರುವ ಪ್ರಯತ್ನ ಮಾಡಬೇಡಿ. ನನ್ನ ಪಾಡಿಗೆ ಬದುಕಲು ಬಿಡಿ. ಒಂದೊಮ್ಮೆ ಬಲವಂತವಾಗಿ ಮತ್ತೆ ಕಾವಿ ತೊಡಿಸಿದರೆ ಬದುಕು ಕಳೆದುಕೊಳ್ಳಬೇಕಾಗುತ್ತದೆʼ ಎಂದು ಪತ್ರದಲ್ಲಿ ಸ್ವಾಮೀಜಿ ಬರೆದಿದ್ದಾರೆ ಎನ್ನಲಾಗಿದೆ.

ಸ್ವಾಮೀಜಿ ಅವರು ತಾವು ಪ್ರೀತಿಸಿದ್ದ ಯುವತಿಯೊಂದಿಗೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಿವಮಹಂತ ಸ್ವಾಮೀಜಿ ಸೋಲೂರು ಸಮೀಪದ ಕಂಬಾಳು ಗ್ರಾಮದಲ್ಲಿ ಅಧ್ಯಯನ ಮಾಡುತ್ತಿದ್ದ ವೇಳೆ ಅದೇ ಗ್ರಾಮದ ಯುವತಿಯನ್ನು ಪ್ರೀತಿಸಿದ್ದರಂತೆ. ಆ ಯುವತಿಗೆ ವಿವಾಹವಾಗಿ ಒಂದೂವರೆ ತಿಂಗಳು ಕಳೆದಿತ್ತು. ಈಗ ಆಕೆಯೊಂದಿಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.

2020 ಜೂನ್‌ 15ರಂದು ವೀರಾಪುರ ಗ್ರಾಮದ ಹರೀಶ್‌ ಸನ್ಯಾಸ ದೀಕ್ಷೆ ಸ್ವೀಕರಿಸಿ, ಶಿವಮಹಾಂತ ಸ್ವಾಮೀಜಿ ಆಗಿದ್ದರು. ಇದಾದ ಬಳಿಕ ಸ್ವಾಮೀಜಿ ದೀಕ್ಷೆಯ ನಿಯಮ ಕಟ್ಟು ಪಾಡುಗಳನ್ನು ಅಧ್ಯಯನ ಮಾಡಲು ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಯಾಗಿದ್ದರು. ಇದರ ಜತೆಗೆ ಇಂಗ್ಲಿಷ್‌ ವಿಷಯದಲ್ಲಿ ದ್ವಿತೀಯ ವರ್ಷದ ಎಂಎ ಕೂಡ ಅಧ್ಯಯನ ಮಾಡುತ್ತಿದ್ದರು.

ಸ್ವಾಮೀಜಿ ನಾಪತ್ತೆ ಬಗ್ಗೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲವಾದರೂ, ಸ್ವಾಮೀಜಿ ಜತೆ ಹೋಗಿದ್ದಾರೆ ಎನ್ನಲಾದ ಯುವತಿಯನ್ನು ಹುಡುಕಿಕೊಡುವಂತೆ ಆಕೆಯ ಪತಿ ಕುದೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.