ಮನೆ ಕಾನೂನು ಎಎಬಿ ಚುನಾವಣೆ: ಹೈಕೋರ್ಟ್‌ ನಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪನೆಗೆ ಮನವಿ: ಮುಖ್ಯ ಚುನಾವಣಾಧಿಕಾರಿಗೆ ನೋಟಿಸ್‌

ಎಎಬಿ ಚುನಾವಣೆ: ಹೈಕೋರ್ಟ್‌ ನಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪನೆಗೆ ಮನವಿ: ಮುಖ್ಯ ಚುನಾವಣಾಧಿಕಾರಿಗೆ ನೋಟಿಸ್‌

0

ಫೆಬ್ರವರಿ 16ಕ್ಕೆ ನಿಗದಿಯಾಗಿರುವ ಬೆಂಗಳೂರು ವಕೀಲರ ಸಂಘದ (ಎಎಬಿ) ಚುನಾವಣೆಯಲ್ಲಿ ಹೈಕೋರ್ಟ್‌ ಘಟಕದಲ್ಲಿ ಮತದಾನ ಮಾಡಲು ಪ್ರತ್ಯೇಕ ಬೂತ್‌ ವ್ಯವಸ್ಥೆ ಮಾಡುವಂತೆ ಕೋರಿರುವ ಅರ್ಜಿ ಸಂಬಂಧ ಮುಖ್ಯ ಚುನಾವಣಾಧಿಕಾರಿ ಹಾಗೂ ಎಎಬಿ ಕಾರ್ಯದರ್ಶಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

Join Our Whatsapp Group

ಹೈಕೋರ್ಟ್‌ ಘಟಕದ ಆಡಳಿತ ಮಂಡಳಿ ಸದಸ್ಯರಾದ ಎಂ ಚಾಮರಾಜ, ಎಸ್‌ ರಾಜು, ಬಿ ಬಾಲಕೃಷ್ಣ ಮತ್ತು ಕೆ ಚಂದ್ರಕಾಂತ್‌ ಪಾಟೀಲ್‌ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಎಂ ಆರ್‌ ರಾಜಗೋಪಾಲ ಅವರು “ಹೈಕೋರ್ಟ್‌ ಘಟಕದಲ್ಲಿ 4,598 ವಕೀಲ ಮತದಾರರಿದ್ದಾರೆ. ಅವರಲ್ಲಿ ಬಹುತೇಕರಿಗೆ ವಯಸ್ಸಾಗಿದೆ. ಹೀಗಾಗಿ, ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಸ್ಥಾಪಿಸಲಾಗುವ ಮತಗಟ್ಟೆಗೆ ತೆರಳಿ ಮತದಾನ ಮಾಡಲಾಗದು. ಹೀಗಾಗಿ, ಹೈಕೋರ್ಟ್‌ನಲ್ಲಿ ಮತಗಟ್ಟೆ ಸ್ಥಾಪಿಸಲು ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶಿಸಬೇಕು” ಎಂದು ಕೋರಿದರು.

ಇದನ್ನು ಆಲಿಸಿದ ಪೀಠವು ಮುಖ್ಯ ಚುನಾವಣಾಧಿಕಾರಿ ಹಾಗೂ ಎಎಬಿ ಪ್ರಧಾನ ಕಾರ್ಯದರ್ಶಿಗೆ ಹ್ಯಾಂಡ್‌ ಸಮನ್ಸ್‌ ಜಾರಿ ಮಾಡಿತು. ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.

ಮೆಯೊ ಹಾಲ್‌, ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್‌ ಸೇರಿ ನಾಲ್ಕು ಘಟಕಗಳಿಗೆ ಫೆಬ್ರವರಿ 16ರಂದು ಚುನಾವಣೆ ನಡೆಯಲಿದೆ. ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಮತದಾನ ಮತ್ತು ಎಣಿಕೆ ನಡೆಯಲಿದೆ.