ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಆದಿಪುರುಷ್’ಟೀಸರ್ ಭಾನುವಾರ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಬಿಡುಗಡೆಗೊಂಡಿದೆ.
ಅನ್ಯಾಯದ ಹತ್ತು ತಲೆಗಳನ್ನು ತುಳಿದುಹಾಕಲು ಬರುತ್ತಿದ್ದೇನೆ ಎಂದು ಪ್ರಭಾಸ್ ಶ್ರೀರಾಮನಾಗಿ ಅಬ್ಬರಿಸುತ್ತಾರೆ. ಸೈಫ್ ಅಲಿಖಾನ್ ರಾವಣನಾಗಿ ಮಿಂಚಿದ್ದಾರೆ. ಇದು ರಾಮಾಯಣದ ರಾಮ–ರಾವಣ ಯುದ್ಧದ ಕಥೆ ಎಂಬುದನ್ನು ಟೀಸರ್ ಹೇಳುತ್ತಿದೆ.
ಅಯೋಧ್ಯೆಯ ಸರಯೂ ನದಿ ತಟದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಭಾಸ್, ಸೈಫ್ ಅಲಿ ಖಾನ್ ಸೇರಿದಂತೆ ಚಿತ್ರ ತಂಡ ಭಾಗಿಯಾಗಿತ್ತು. ರಾಮಾಯಣದ ಯುಗವನ್ನು ಗ್ರಾಫಿಕ್ಸ್ ನಲ್ಲಿ ಚಿತ್ರಿಸಲಾಗಿದ್ದು, ಗ್ರಾಫಿಕ್ಸ್ ಗುಣಮಟ್ಟದ ಕುರಿತು ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ‘ಇದಕ್ಕಿಂತ ಕಾರ್ಟೂನ್ ನೆಟ್‌ವರ್ಕ್ ಗ್ರಾಫಿಕ್ಸ್ ಚೆನ್ನಾಗಿರುತ್ತವೆ. ಚೋಟಾ ಭೀಮ್ ಚೆನ್ನಾಗಿದೆ’ಎಂಬಂತೆ ಅನೇಕರು ಪ್ರಭಾಸ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ಶ್ರೀರಾಮನಾಗಿ ಪ್ರಭಾಸ್ ಅಷ್ಟೊಂದು ಸೂಕ್ತವಾಗಿ ಕಾಣುತ್ತಿಲ್ಲ. ಅವರಿಗಿಂತ ಸೈಫ್ ಅಲಿಖಾನ್ ರಾವಣನಾಗಿ ಅತ್ಯುತ್ತಮವಾಗಿ ಕಾಣುತ್ತಿದ್ದಾರೆ ಎನ್ನುವಂತಹ ಪ್ರತಿಕ್ರಿಯೆಗಳೇ ಹೆಚ್ಚಾಗಿವೆ. ಶ್ರೀರಾಮನ ಬಂಟ ಆಂಜನೇಯನಾಗಿ ಮರಾಠಿ ಧಾರವಾಹಿ ನಟ ದೇವದತ್ತ ನಾಗೆ ಮಿಂಚಿದ್ದಾರೆ. ಸೀತೆಯಾಗಿ ಕೃತಿ ಸನನ್ ಚೆನ್ನಾಗಿ ಕಾಣುತ್ತಿದ್ದರೂ, ಹಿನ್ನೆಲೆ ದೃಶ್ಯದಲ್ಲಿ ಸೊಬಗಿಲ್ಲ. ಹೀಗಾಗಿ ಪ್ರಭಾಸ್ ಅಭಿಮಾನಿಗಳೇ ಆದಿಪುರುಷ್ ಟೀಸರ್ ಕುರಿತು ನಿರಾಸೆಯ ಪ್ರತಿಕ್ರಿಯೆ ದಾಖಲಿಸುತ್ತಿದ್ದಾರೆ.
ಪೌರಾಣಿಕ ಕಥಾ ಹಂದರವುಳ್ಳ ಹಿಂದಿ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ‘ಆದಿಪುರುಷ್’ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಟಿ ಸೀರೀಸ್ ಪ್ರೊಡಕ್ಸನ್ ಕಂಪನಿ ಈ ಚಿತ್ರವನ್ನು ಸುಮಾರು ₹500 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಅಜಯ್ ದೇವಗನ್ ಅಭಿನಯದ ‘ತಾನಾಜಿ’ ಸಿನಿಮಾ ನಿರ್ದೇಶಿಸಿದ್ದ ಓಂ ರಾವುತ್ ‘ಆದಿಪುರುಷ್’ ನಿರ್ದೇಶನ ಮಾಡುತ್ತಿದ್ದಾರೆ. ಇದು 3ಡಿ ಯಲ್ಲಿ ಮೂಡಿಬರುತ್ತಿರುವುದು ವಿಶೇಷ. ಜ.12, 2023ರಂದು ಚಿತ್ರ ತೆರೆಗೆ ಬರಲಿದೆ.