ನವದೆಹಲಿ: ಯಮುನಾ ನದಿಗೆ ವಿಷ ಬೆರೆಸಲಾಗುತ್ತಿದೆ ಎನ್ನುವ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಎಎಪಿಯವರು ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಹತಾಶರಾಗಿದ್ದಾರೆ ಎಂದು ಹೇಳಿದ್ದಾರೆ.
ಕರ್ತಾರ್‌ನಗರಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಜನರನ್ನು ವಂಚಿಸಿ ಕುಖ್ಯಾತಿ ಗಳಿಸಿದ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌ಗೆ ಎಎಪಿ ನಾಯಕರನ್ನು ಹೋಲಿಸಿದ್ದಾರೆ.
‘ಶೀಶ್ ಮಹಲ್ ಕಟ್ಟಿದವರು ಹಾಗೂ ಜನರ ಕೋಟ್ಯಂತರ ರೂಪಾಯಿಯನ್ನು ಲೂಟಿ ಮಾಡಿದವರು ಜನ ಕಲ್ಯಾಣದ ಬಗ್ಗೆ ಯೋಚನೆ ಮಾಡಲೂ ಸಾಧ್ಯವಿಲ್ಲ. ಹೀಗಾಗಿ ಅವರು ದೆಹಲಿಯಲ್ಲಿ ಸುಳ್ಳು ಹಬ್ಬಿಸುತ್ತಿದ್ದಾರೆ. ಜನರು ಬಲೆಗೆ ಬೀಳುವಷ್ಟು ಮುಗ್ದವಾಗಿ ಎಎಪಿಯವರು ಸುಳ್ಳು ಹೇಳುತ್ತಾರೆ’ ಎಂದು ಮೋದಿ ಟೀಕಿಸಿದ್ದಾರೆ.
ನೀವು ಚಾರ್ಲ್ಸ್ ಶೋಭರಾಜ್ ಬಗ್ಗೆ ಕೇಳಿರಬಹುದು. ಅವನು ಕುಖ್ಯಾತ ಮೋಸಗಾರ. ಅವನು ಮುಗ್ಧರಂತೆ ನಟಿಸಿ ಜನರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಪ್ರತಿ ಬಾರಿಯೂ ಜನ ಅವನಿಂದ ಮೋಸ ಹೋಗುತ್ತಿದ್ದರು. ಹೀಗಾಗಿ ಪ್ರತಿಯೊಬ್ಬರು ಅಂಥವರಿಂದ ಎಚ್ಚರಿಕೆಯಿಂದಿರಬೇಕು’ ಎಂದು ಮೋದಿ ಹೇಳಿದ್ದಾರೆ.
ಎಎಪಿ ಸರ್ಕಾರದ ನೆಪ, ಸುಳ್ಳು ಆಶ್ವಾಸನೆ, ಲೂಟಿಕೋರತನ, ಸುಳ್ಳು ನಡೆಯುವುದಿಲ್ಲ ಎಂದು ದೆಹಲಿಯ ಜನ ಸ್ಪಷ್ಟಪಡಿಸಿದ್ದಾರೆ. ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ ಎಂದು ಪ್ರಧಾನಿ ಜನರಲ್ಲಿ ವಿನಂತಿಸಿದ್ದಾರೆ.
ಕೆಳದೆರಡು ಚುನಾವಣೆಯಲ್ಲಿ ಯಮುನೆಯನ್ನು ಶುದ್ಧ ಮಾಡುತ್ತೇವೆ ಎಂದವರು, ಈಗ ಅದಕ್ಕೆ ಮತ ಬೀಳುವುದಿಲ್ಲ ಎಂದು ಹೇಳುತ್ತಾರೆ. ಇದು ಮೋಸ ಹಾಗೂ ನಾಚಿಗೇಡಿತನ. ನೀರಿಗಾಗಿ ಜನರನ್ನು ಪರದಾಡುವಂತೆ ಅವರು ಮಾಡುತ್ತಾರೆ. ಹರಿಯಾಣ ಹಾಗೂ ದೇಶದ ಜನತೆ ಎಂದೂ ಮರೆಯಲಾಗದ ಪಾಪವನ್ನು ಅವರು ಮಾಡಿದ್ದಾರೆ ಎಂದು ಮೋದಿ ಕಿಡಿಕಾರಿದ್ದಾರೆ.
ಮಾಜಿ ಸಿಎಂ ಒಬ್ಬರು ಹರಿಯಾಣದ ಜನರ ಬಗ್ಗೆ ದ್ವೇಷಪೂರಿತ ಆರೋಪ ಮಾಡಿದ್ದಾರೆ. ದೆಹಲಿ– ಹರಿಯಾಣ ಬೇರೆ ಬೇರೆಯಾ? ಅವರ ಮಕ್ಕಳು, ಸಂಬಂಧಿಕರು ದೆಹಲಿಯಲ್ಲಿ ಇದ್ದಾರೆ. ಸ್ವಂತ ಜನರಿಗೆ ವಿಷವುಣಿಸುವ ಕೆಲಸ ಅವರು ಮಾಡುತ್ತಾರೆಯೆ ಎಂದು ಮೋದಿ ಪ್ರಶ್ನಿಸಿದ್ದಾರೆ.