ಅಭಿಷೇಕ್ ಅಂಬರೀಶ್ ನಾಯಕರಾಗಿರುವ “ಬ್ಯಾಡ್ ಮ್ಯಾನರ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇದರ ಬೆನ್ನಿಗೆ ಅಭಿಷೇಕ್ ನಟನೆಯ ಮತ್ತೂಂದು ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಅದು ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರ.
ಈ ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿರುವ ಮತ್ತೂಂದು ಅದ್ಧೂರಿ ಚಿತ್ರ ಇದಾಗಿದ್ದು, ಈ ಚಿತ್ರಕ್ಕಾಗಿ ಅಭಿಷೇಕ್ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಅದಕ್ಕೆ ಕಾರಣ ಈ ಸಿನಿಮಾದ ಕಥೆ. ಈ ಸಿನಿಮಾದಲ್ಲಿ ನಿರ್ದೇಶಕ ಮಹೇಶ್, ಹತ್ತನೇ ಶತಮಾನದ ಕಥೆಯನ್ನು ಹೇಳಲು ಹೊರಟಿದ್ದು, ಚಿತ್ರದಲ್ಲಿ ಅಭಿಷೇಕ್ ಯೋಧನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಅದೇ ಕಾರಣದಿಂದ ಪಾತ್ರಕ್ಕೆ ಅಗತ್ಯವಾಗಿ ಬೇಕಾದ ಕತ್ತಿ ವರಸೆ, ಕಲರಿಪಯಟ್ಟು ಸೇರಿದಂತೆ ಅನೇಕ ಅಂಶಗಳ ತಯಾರಿಯಲ್ಲಿ ಅಭಿಷೇಕ್ ತೊಡಗಿದ್ದಾರೆ. ಇವರ ತರಬೇತಿಗೆ ಪೂರಕವಾಗುವಂತೆ ವಿಶೇಷ ತರಬೇತುದಾರರನ್ನು ಕೂಡಾ ನೇಮಿಸಲಾಗಿದೆ.
ಯೋಧನ ಪಾತ್ರ ಮಾಡುತ್ತಿರುವುದರಿಂದ ಫಿಟ್ ಆಗಿ ಕಾಣಿಸಬೇಕೆಂಬ ಕಾರಣಕ್ಕೆ ದಿನದ ನಾಲ್ಕು ಗಂಟೆಗಳನ್ನು ಅಭಿಷೇಕ್ ಜಿಮ್‌ನಲ್ಲಿ ಕಳೆಯುತ್ತಿರುವುದರ ಜೊತೆಗೆ ಭಾಷಾ ಸ್ಪಷ್ಟತೆಯ ಕಡೆಗೂ ಹೆಚ್ಚು ಗಮನ ಕೊಡುತ್ತಿದ್ದಾರೆ. ಈ ಮೂಲಕ ಬಿಗ್ ಬಜೆಟ್‌ನ ಚಿತ್ರಕ್ಕಾಗಿ ಅಭಿಷೇಕ್ ಕೂಡಾ ದೊಡ್ಡ ಮಟ್ಟದಲ್ಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ
ಎಲ್ಲಾ ಓಕೆ, ಈ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಮೂಲಗಳ ಪ್ರಕಾರ 2024 ಸಂಕ್ರಾಂತಿಗೆ ಈ ಚಿತ್ರ ಸೆಟ್ಟೇರಲಿದೆ. ಸದ್ಯ ರಾಕ್‌ಲೈನ್ ನಿರ್ಮಾಣದ “ಕಾಟೇರ’ ಹಾಗೂ “ಕರಟಕ ಧಮನಕ’ ಚಿತ್ರಗಳು ನಡೆಯುತ್ತಿವೆ. ಆ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ಬೆನ್ನಲ್ಲೇ ಅಭಿಷೇಕ್ ಅಂಬರೀಶ್ ನಾಯಕರಾಗಿರುವ ಚಿತ್ರ ಸೆಟ್ಟೇರಲಿದೆ.














