ಬೆಂಗಳೂರು(Bengaluru): ಎಸಿಬಿ ಎಡಿಜಿಪಿ ವಿರುದ್ಧ ನನಗೇನು ದ್ವೇಷವಿಲ್ಲ. ಅನುಮಾನ ಬರಲು ಹಲವು ಕಾರಣಗಳಿವೆ. ಅಧಿಕಾರಿ ರಕ್ಷಣೆಗಾಗಿಯೇ ಸಂಪೂರ್ಣ ವರದಿ ನೀಡಿಲ್ಲ. ಅವರಿಗೆ ಆತ್ಮಸಾಕ್ಷಿ ಕೇಳಿಕೊಳ್ಳಲು ಹೇಳಿ ಎಂದು ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಎಸಿಬಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರು ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಕಾರ್ಯವೈಖರಿ ಕುರಿತು ನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಚಾರಣೆ ವೇಳೆ ಎಸಿಬಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ನೀವು ಕೊಟ್ಟಿರುವ ವರದಿ ಸಂಪೂರ್ಣ ಸತ್ಯವಾಗಿಲ್ಲ. ಈ ವರ್ಷ ಸಲ್ಲಿಸಿದ ಬಿ ರಿಪೋರ್ಟ್ ಗಳ ಮಾಹಿತಿಯನ್ನು ಸಮರ್ಪಕವಾಗಿ ಸಲ್ಲಿಸಿಲ್ಲ. ನೀವು ಈ ಆಟವಾಡುತ್ತೀರಿ ಎಂದು ತಿಳಿದೇ ಮಾಹಿತಿ ಪಡೆದಿದ್ದೇನೆ. ೮೧೯ ಸರ್ಚ್ ವಾರಂಟ್ ಗಳನ್ನು ಪಡೆದಿದ್ದೀರಿ. ೨೮ ಸರ್ಚ್ ವಾರಂಟ್ ಜಾರಿ ಮಾಡಿಲ್ಲ. ಕೋರ್ಟ್ ಹೇಳಿದ ಮೇಲಷ್ಟೇ ಜಿಲ್ಲಾಧಿಕಾರಿಯನ್ನು ಆರೋಪಿಯಾಗಿಸಿದ್ದೀರಿ. ಮೊದಲೇ ಏಕೆ ಕ್ರಮ ಜರುಗಿಸಲಿಲ್ಲ. ಕ್ರಮ ಜರುಗಿಸುವುದು ಎಸಿಬಿ ಎಡಿಜಿಪಿ ಜವಾಬ್ದಾರಿಯಲ್ಲವೇ ? ಎಂದು ಪ್ರಶ್ನಿಸಿದರು.
ಎಸಿಬಿ ಎಡಿಜಿಪಿ ಕಾರ್ಯವೈಖರಿ ಟೀಕಿಸಿದ ನ್ಯಾಯಮೂರ್ತಿಗಳು, ದಕ್ಷ ಅಧಿಕಾರಿಗಳಿಗೇಕೆ ಸೂಕ್ತ ಜವಾಬ್ದಾರಿಗಳನ್ನು ವಹಿಸಲಿಲ್ಲ ಎಂದು ಕೇಳಿದ್ದಾರೆ. ಅಲ್ಲದೇ, ಎಡಿಜಿಪಿ ವಿರುದ್ಧ ನನಗೇನೂ ವೈಯಕ್ತಿಕ ದ್ವೇಷವಿಲ್ಲ. ಅವರ ವಿರುದ್ಧ ಅನುಮಾನಗಳು ಹುಟ್ಟಲು ಹಲವು ಕಾರಣಗಳಿವೆ. ಅವರಿಗೆ ಆತ್ಮಸಾಕ್ಷಿ ಕೇಳಿಕೊಳ್ಳಲು ಹೇಳಿ ಎಂದು ಸೂಚಿಸಿದರು.
ಹಾಗೆಯೇ, ಬಳ್ಳಾರಿ ಎಸ್ಪಿ ಆಗಿದ್ದ ವೇಳೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ಇವರ ಮನೆ ಮೇಲೆ ನಡೆಸಿದ್ದ ದಾಳಿಯ ತನಿಖಾ ವರದಿ ಸಲ್ಲಿಸುವಂತೆಯೂ ಸೂಚಿಸಿದ್ದಾರೆ.
ಹೈಕೋರ್ಟ್ ಮೊರೆ ಹೋದ ಎಸಿಬಿ ಎಡಿಜಿಪಿ : ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರು ತಮ್ಮನ್ನು ಟೀಕಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ರಿಟ್ ಅರ್ಜಿ ಸಲ್ಲಿಸಿರುವ ಅಧಿಕಾರಿ ಸಿಂಗ್, ತಮ್ಮ ವಿರುದ್ಧ ಟೀಕೆ ಮಾಡದಂತೆ ನಿರ್ಬಂಧಿಸಬೇಕು. ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರ ಮೌಖಿಕ ಅಭಿಪ್ರಾಯ ತೆಗೆಯಬೇಕು. ಹಾಗೆಯೇ, ತಮ್ಮ ಸರ್ವೀಸ್ ರೆಕಾರ್ಡ್ ಕೇಳಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದ್ದಾರೆ.