ಬೆಂಗಳೂರು (Bengaluru): ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದುಗೊಳಿಸಿರುವ ಕರ್ನಾಟಕ ಹೈ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದೆ.
ಕನಕರಾಜು ಎಂಬ ವ್ಯಕ್ತಿಯೊಬ್ಬರು ವಕೀಲ ಅಶೋಕ್ ಪಾಣಿಗ್ರಾಹಿ ಅವರ ಮೂಲಕ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಸಿ.ಟಿ.ರವಿಕುಮಾರ್ ಪೀಠದ ಮುಂದೆ ಖಾಸಗಿ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರವೇ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಪೀಠ ಹೇಳಿದೆ.
ಇದಕ್ಕು ಮುನ್ನ ರಾಜ್ಯ ಸರ್ಕಾರವೇ ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ ಎಂದು ವರದಿಯಾಗಿತ್ತು. ಆದರೆ ಈ ವರದಿಯನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಖಾಸಗಿ ಮೇಲ್ಮನವಿ ಅರ್ಜಿ ದಾಖಲಾಗಿದೆ. ಈ ವಿಚಾರದಲ್ಲಿ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಎಸಿಬಿ ರದ್ದು ಮಾಡುವ ನಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಮಹತ್ವದ ಬೆಳವಣಿಗೆಯಲ್ಲಿ ಈ ಹಿಂದಿನ ಸರ್ಕಾರ 2016ರಲ್ಲಿ ರಚನೆ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಕರ್ನಾಟಕ ಹೈಕೋರ್ಟ್ ಇತ್ತೀಚಿಗೆ ರದ್ದುಗೊಳಿಸಿ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿತ್ತು. ಎಸಿಬಿಗೆ ನೀಡಲಾಗಿದ್ದ ಪೊಲೀಸ್ ಠಾಣೆ ಸ್ಥಾನಮಾನವನ್ನು ಮರಳಿ ಲೋಕಾಯುಕ್ತ ಸಂಸ್ಥೆಗೆ ನೀಡಿದೆ.