ಮೈಸೂರು(Mysuru): ಒದಗಿಬರುವ ಅವಕಾಶಗಳನ್ನು ಕೀಳರಿಮೆ ತೋರದೆ ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು, ಸವಾಲು ಎದುರಿಸಿ ಗುರಿ ಸಾಧಿಸುವ ಛಲವಂತಿಕೆ ಮೈಗೂಡಿಸಿಕೊಳ್ಳಬೇಕು ಆಗಮಾತ್ರ ನಮ್ಮಲ್ಲಿರುವ ಪ್ರತಿಭೆ ಹಾಗೂ ಸಾಮರ್ಥ್ಯ ಹೊರಹೊಮ್ಮಲು ಸಾಧ್ಯವೆಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಅಭಿಪ್ರಾಯಿಸಿದರು.
ಆರ್ ಟಿ ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಆಯೋಜಿಸಿದ 15 ದಿನಗಳ ‘ಬೇಸಿಗೆ ಬಂಡಿ’ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನ, ವೇಗದ ಜಗತ್ತಿನೊಂದಿಗೆ ನಡೆಯಬೇಕಾದ ಅನಿವಾರ್ಯತೆ ಸೃಷ್ಟಿಸಿದ್ದು ಈ ನಿಟ್ಟಿನಲ್ಲಿ ಭವಿಷ್ಯತ್ತಿನ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಉತ್ತೇಜಿಸುವ ಉತ್ತಮ ಅವಕಾಶವನ್ನು ಕಲ್ಪಿಸಿ ಕೊಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಹೇಳಿದರು.
ಶಿಬಿರಾರ್ಥಿ ವಿದ್ಯಾರ್ಥಿಗಳಿಂದ ಶಿಬಿರದ ಸಮಯದಲ್ಲಿ ಕಲಿತ ಜಾನಪದ ನೃತ್ಯ, ನಾಟಕ, ಸಮೂಹ ಗಾಯನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೆರೆದಿದ್ದ ಪೋಷಕರು ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಯಿತು. ಶಿಬಿರದ ಆಟೋಟಗಳಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಸಿದ್ದರಾಮೇಶ್ವರ ಟ್ರಸ್ಟ್ ಅಧ್ಯಕ್ಷ ಕೆಂಚಪ್ಪ , ಎಫ್. ಎಮ್. ರೇಡಿಯೋ ಕಾರ್ಯಕ್ರಮ ನಿರೂಪಕ ಅವಿನಾಶ್ ಅವರನ್ನು ಗೌರವಿಸಲಾಯಿತು. ಪ್ರಾಂಶುಪಾಲೆ ಶಿಲ್ಪಾ ಪ್ರಶಾಂತ್ ಉಪಸ್ಥಿತರಿದ್ದರು.