ಕೋಲಾರ : ಭಾರಿ ಗಾಳಿ ಮಳೆಯಿಂದ ನೆಲಕ್ಕುರುಳಿದ್ದ ವಿದ್ಯುತ್ ತಂತಿಗೆ ಬೈಕ್ ಸ್ಪರ್ಶಿಸಿದ ಪರಿಣಾಮ, ಸಾರಿಗೆ ಇಲಾಖೆಯ ನೌಕರರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ರಾಜೇಂದ್ರ ಹಳ್ಳಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ರಾಜೇಂದ್ರ ಹಳ್ಳಿಯಲ್ಲಿಂದು ಮುಂಜಾನೆ ಈ ಘಟನೆ ನಡೆದಿದ್ದು, ಗ್ರಾಮದ ರೆಡ್ಡಪ್ಪ (58) ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಕಳೆದ ರಾತ್ರಿ ಬಿರುಗಾಳಿ ಮಳೆಯಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿದ್ದವು. ತಂತಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಇಂದು ಮುಂಜಾನೆ ಎದ್ದು ಎಂದಿನಂತೆ ತೋಟಕ್ಕೆ ತೆರಳುವ ವೇಳೆ ಬೈಕ್‌ಗೆ ತಂತಿ ಸ್ಪರ್ಶವಾಗಿ ರೆಡ್ಡಪ್ಪ ಸಾವನ್ನಪ್ಪಿದ್ದಾರೆ.
ಕಳೆದ ರಾತ್ರಿ ಕ್ಷೇತ್ರದಲ್ಲಿ ತೀವ್ರ ಬಿರುಗಾಳಿ ಹಾಗೂ ಮಳೆ ಉಂಟಾಗಿ ಹಲವೆಡೆ ವಿದ್ಯುತ್ ಕಂಬಗಳು ಧರೆಗೆ ಬಿದ್ದಿದ್ದವು. ಅನೇಕ ಸ್ಥಳಗಳಲ್ಲಿ ವಿದ್ಯುತ್ ತಂತಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರೂ ಈ ಬಗ್ಗೆ ಎಚ್ಚರಿಕೆ ಸೂಚನೆಗಳಿಲ್ಲದಿದ್ದ ಕಾರಣ ಸಾರ್ವಜನಿಕರಿಗೂ ಅಪಾಯ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ತಕ್ಷಣ ಧಾವಿಸಿ ವಿದ್ಯುತ್ ಸಂಪರ್ಕ ಕಡಿದು, ತಂತಿಗಳನ್ನು ತೆರವುಗೊಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರು, ವಿದ್ಯುತ್ ಇಲಾಖೆ ಅವಘಡವನ್ನು ತಪ್ಪಿಸಲು ತ್ವರಿತ ಕ್ರಮ ತೆಗೆದುಕೊಂಡಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.














