ಬೆಂಗಳೂರು: ತಮಿಳುನಾಡಿನ ಧರ್ಮಪುರಿಗೆ ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಕರ್ನಾಟಕ ಮೀಸಲು ಪಡೆಯ ಹಿರಿಯ ಅಧಿಕಾರಿ ಮತ್ತು ಕಾನ್ಸ್ ಟೇಬಲ್ ಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಹಾಗೂ ಮತ್ತೊಬ್ಬ ಕಾನ್ಸ್ ಟೇಬಲ್ ಗಾಯಗೊಂಡಿದ್ದಾರೆ.
ಕರ್ನಾಟಕ ಮೀಸಲು ಪಡೆಯ ಕೋರಮಂಗಲದಲ್ಲಿರುವ 3ನೇ ಬೆಟಾಲಿಯನ್ ನ 3ನೇ ಸಹಾಯಕ ಕಮಾಂಡೆಂಟ್ ಟಿ.ಪ್ರಭಾಕರ್ ಮತ್ತು ವಿಜಯಪುರದ ಐಆರ್ ಬಿ (ಇಂಡಿಯನ್ ರಿಸರ್ವ್ ಬೆಟಾಲಿಯನ್)ನ ಕಾನ್ಸ್ ಟೇಬಲ್ ವಿಠಲ್ ಗಡಾಧರ್, ತಮಿಳುನಾಡಿನ ಮೀಸಲು ಪಡೆಯ ಕಾನ್ಸ್ ಟೇಬಲ್ ದಿನೇಶ್ ಎಂಬವವರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ವಿಜಯಪುರದ ಐಆರ್ ಬಿ ಡೆಪ್ಯೂಟಿ ಕಮಾಂಡೆಂಟ್ ಯು.ಎನ್.ಹೇಮಂತ್ ಕುಮಾರ್ ಮತ್ತು ಕಾನ್ಸ್ ಟೇಬಲ್ ಜಯಕುಮಾರ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಕೆಎಸ್ ಆರ್ ಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
10 ದಿನಗಳ ಹಿಂದೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಎಸ್ ಆರ್ ಪಿಯ ತುಕಡಿಯನ್ನು ತಮಿಳುನಾಡಿನ ಧರ್ಮಪುರಿಗೆ ನಿಯೋಜಿಸಲಾಗಿತ್ತು. ಅದಕ್ಕೆ ಹೇಮಂತ್ ಕುಮಾರ್ ಮುಂದಾಳತ್ವ ವಹಿಸಿದ್ದರು. ಗುರುವಾರ ಸಂಜೆ 5.30ರ ಸುಮಾರಿಗೆ ತಿರುವಣ್ಣಾಮಲೈನಿಂದ ದಿಂಡಿವಣ್ಣಂ ಕಡೆಗೆ ಜೀಪ್ ನಲ್ಲಿ ಐವರು ಅಧಿಕಾರಿ ಮತ್ತು ಸಿಬ್ಬಂದಿ ತೆರಳುತ್ತಿದ್ದರು. ಕಮಾಂಡೆಂಟ್ ಪ್ರಭಾಕರ್ ಜೀಪ್ ನ ಮುಂಭಾಗ ಕುಳಿತಿದ್ದರು. ಹಿಂಭಾಗದಲ್ಲಿ ಕಾನ್ಸ್ ಟೇಬಲ್ ವಿಠಲ್, ಡೆಪ್ಯೂಟಿ ಕಮಾಂಡೆಂಟ್ ಹೇಮಂತ್ ಹಾಗೂ ತಮಿಳುನಾಡಿನ ಸಿಬ್ಬಂದಿ, ಕಾನ್ಸ್ಟೇಬಲ್ ಇದ್ದರು.
ಮಾರ್ಗ ಮಧ್ಯೆ ಅತಿ ವೇಗವಾಗಿ ಬಂದ ತಮಿಳುನಾಡಿನ ಬಸ್ ಇವರ ಜೀಪಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರಭಾಕರ್, ವಿಠಲ್, ತಮಿಳುನಾಡಿನ ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಕೆಎಸ್‌ಆರ್‌ಪಿಯ ಹಿರಿಯ ಅಧಿಕಾರಿ ಭೀಮಪ್ಪ ಎಂಬವರನ್ನು ನಿಯೋಜಿಸಲಾಗಿದ್ದು, ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಬಳಿಕ ಅಧಿಕಾರಿ-ಸಿಬ್ಬಂದಿಯ ಮರಣೋತ್ತರ ಪರೀಕ್ಷೆ ಹಾಗೂ ಮೃತದೇಹಗಳನ್ನು ರಾಜ್ಯಕ್ಕೆ ತರುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಕೆಎಸ್ ಆರ್ ಪಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.