ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ನಂತರ ರಾಜಕೀಯ ಬಿರುಸು ತೀವ್ರಗೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮೇಲೆಯೇ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಗೃಹ ಸಚಿವರಿಗೆ ಖಾತೆ ಬದಲಾಯಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು.
ಈ ಬಗ್ಗೆ ಖುದ್ದು ಗೃಹ ಸಚಿವ ಡಾ. ಪರಮೇಶ್ವರ್ ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿದ್ದು, “ಇವು ಸತ್ಯಕ್ಕೆ ದೂರವಾದ, ಸುಳ್ಳು ವದಂತಿಗಳು. ನಾನು ಖಾತೆ ಬದಲಾವಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿ ಯಾವತ್ತೂ ಯಾವುದೇ ರೀತಿಯ ಮನವಿ ಸಲ್ಲಿಸಿಲ್ಲ” ಎಂದು ಖಂಡಿಸಿದ್ದಾರೆ.
“ಖಾತೆ ಬದಲಾವಣೆ ಕೇಳಿದ್ದೇನೆ ಅನ್ನೋದು ಯಾರ ಹೇಳಿಕೆ? ಏನೇ ವಿಷಯ ಇದ್ದರೂ ನಾನೇ ಹೇಳಬೇಕು ಅಲ್ಲವಾ? ನನ್ನ ಪತ್ನಿಯೊಂದಿಗೂ ಸಹ ರಾಜಕೀಯ ಚರ್ಚೆ ಮಾಡುವವನಲ್ಲ. ನಾನು ಯಾವುದೇ ಖಾತೆ ಬದಲಾವಣೆಗೆ ಕೇಳಿಲ್ಲ. ಇದು ನನ್ನ ವ್ಯಕ್ತಿತ್ವವನ್ನೇ ಕೊಲ್ಲುವ ಪ್ರಯತ್ನ, ಇದು ಯಾವುದೇ ರಾಜಕಾರಣಿಗೆ ಶೋಭೆ ತರುವುದಿಲ್ಲ. ನಾನು ಸದಾ ಸಂಯಮದಿಂದ ನಡೆದುಕೊಂಡಿದ್ದೇನೆ.”
ಡಾ. ಪರಮೇಶ್ವರ್ ಈ ಸಂದರ್ಭ ಮತ್ತೊಂದು ವದಂತಿಯನ್ನೂ ಖಂಡಿಸಿದ್ದಾರೆ. “ದೆಹಲಿಗೆ ನಮ್ಮನ್ನು ಕರೆದು ಕೇಳಲಾಗಿದೆ ಎಂಬ ಮಾತುಗಳಿಗೂ ಸತ್ಯಾಧಾರವಿಲ್ಲ. ಹೈಕಮಾಂಡ್ ಮಾತ್ರ ದೂರವಾಣಿ ಮೂಲಕ ಮಾಹಿತಿ ಕೇಳಿದ್ದು, ದೆಹಲಿ ಅಥವಾ ಮುಂಬೈಗೆ ಯಾರೂ ಕರೆದಿಲ್ಲ. ಸಿಎಂ ಹಾಗೂ ಡಿಸಿಎಂ ಅವರಿಂದ ಮಾಹಿತಿ ಪಡೆದಿದ್ದಾರೆ ಅಷ್ಟೆ” ಎಂದು ಸ್ಪಷ್ಟಪಡಿಸಿದರು.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೂ ಮಾತನಾಡಿದ ಅವರು, “ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿದೆ ಎಂಬುದರ ಕುರಿತು ಕೇಂದ್ರ ಗೃಹ ಇಲಾಖೆ ಪತ್ರ ನೀಡಿದ್ದಾರೆ. ಆದರೆ ಯಾರ ರೆಫರೆನ್ಸ್ ಮೇಲೆ ಎನ್‌ಐಗೆ ವಹಿಸಲಾಗಿದೆ ಎಂಬುದು ನಮಗೆ ಸ್ಪಷ್ಟವಿಲ್ಲ. ನಮ್ಮ ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಯಾವ ಆಧಾರದ ಮೇಲೆ ಈ ವರ್ಗಾವಣೆ ಆಗಿದೆ ಎಂಬುದರ ಬಗ್ಗೆ ಇಂದು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.















