ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತನನ್ನು ತಮಿಳುನಾಡು ಮೂಲದ ಸೆಡೆಯಾನ್ ಎಂದು ಗುರುತಿಸಲಾಗಿದೆ. ಆರೋಪಿ ಬೆಟ್ಟದ ಆನೆತಲೆದಿಂಬ ಬಳಿ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ. ಬಂಧಿತನಿಂದ 33 ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಭಕ್ತರಂತೆ ಬಂದು ಗಂಧ ಕಳ್ಳತನಕ್ಕೆ ಯತ್ನಿಸುತ್ತಿದ್ದ ಬಾಲಕನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈತನ ಜೊತೆಗಿದ್ದ ಇಬ್ಬರು ಪರಾರಿಯಾಗಿದ್ದಾರೆ. ಹನೂರು ತಾಲೂಕಿನ ಕೊಕ್ಕಬೋರೆ ಪ್ರದೇಶದ ದೊಡ್ಡ ಬರೇಹಳ್ಳದ ಬಳಿ ಶ್ರೀಗಂಧ ಮರ ಕತ್ತರಿಸುವ ವೇಳೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಬಾಲಕ ಸಿಕ್ಕಿಬಿದ್ದಿದ್ದಾನೆ.
ಕಳ್ಳರು ಭಕ್ತರ ವೇಷದಲ್ಲಿ ಬೆಟ್ಟಕ್ಕೆ ಬಂದು ಮಲೆ ಮಹದೇಶ್ವರ ವನ್ಯಧಾಮದ ಮೀಸಲು ಅರಣ್ಯ ಪ್ರದೇಶ ಪ್ರವೇಶಿಸುತ್ತಿದ್ದರು. ಅಲ್ಲಿ ಗಂಧದ ಮರಗಳನ್ನು ಕತ್ತರಿಸಿ ಕೊಂಡೊಯ್ಯುತ್ತಿದ್ದರು. ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾದ ಶ್ರೀಗಂಧ ಕಳ್ಳರನ್ನು ಪೆರುಮಾಳ್ ಹಾಗೂ ಮುರುಗನ್ ಎಂದು ಗುರುತಿಸಲಾಗಿದೆ.















