ಬೆಂಗಳೂರು: ಮದ್ಯಪಾನ ಮಾಡಿ ತಾಯಿಗೆ ನಿಂದಿಸುತ್ತಿದ್ದ ಸಹೋದರನಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿಯನ್ನು ಕೆಜಿಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿಯ ಅಕ್ಬರ್ (29) ಬಂಧಿತ ಆರೋಪಿ. ಈತನ ತಮ್ಮ ಅಕ್ರಂ ಬೇಗ್ (28) ಕೊಲೆಯಾದವ.
ಎಂ.ಜಿ. ರಸ್ತೆಯ ಖಾಸಗಿ ಸಂಸ್ಥೆಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಕ್ರಂ ಕೆ.ಜಿ.ಹಳ್ಳಿಯಲ್ಲಿ ತಾಯಿ ಜೊತೆಗೆ ವಾಸಿಸುತ್ತಿದ್ದ. ತಾಯಿ ಅಫ್ರೀನ್(50) ಮನೆ ಕೆಲಸ ಮಾಡುತ್ತಿದ್ದರು. ಆರೋಪಿ ಅಕºರ್ ಆಟೋ ಚಾಲಕನಾಗಿದ್ದ. ಕೊಲೆಯಾದ ಅಕ್ರಂ ಪ್ರತಿದಿನ ಮದ್ಯಪಾನ ಮಾಡಿ ಬಂದು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿದ್ದ. ಬುಧವಾರ ರಾತ್ರಿ ಮದ್ಯಪಾನ ಮಾಡಿ ತಾಯಿ ಜೊತೆ ಜಗಳ ಮಾಡಿದ್ದ. ಇದೇ ವೇಳೆ ಹಿರಿಯ ಪುತ್ರ ಅಕ್ಬರ್ ಮನೆಗೆ ಬಂದಿದ್ದ.
ಸಹೋದರ ತಾಯಿಗೆ ಬೆದರಿಸಿದ್ದಕ್ಕೆ ಆಕ್ರೋಶಗೊಂಡು ಅಡುಗೆ ಮನೆಯಲ್ಲಿದ್ದ ಚೂರಿಯಿಂದ ಅಕ್ರಂಗೆ ಇರಿದಿದ್ದ. ನಂತರ ಗಂಭೀರವಾಗಿ ಗಾಯಗೊಂಡ ಅಕ್ರಂನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇದರ ಬೆನ್ನಲ್ಲೇ ಕೆಜಿಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.














