ಮನೆ ಅಪರಾಧ ಕದ್ದ ಮೊಬೈಲ್‌ ಗ‌ಳ ಫೋನ್‌ ಪೇ, ಗೂಗಲ್‌ ಪೇಗಳ ಪಿನ್‌ ಕೋಡ್‌ ಬದಲಿಸಿ ಹಣ ದೋಚುತ್ತಿದ್ದ...

ಕದ್ದ ಮೊಬೈಲ್‌ ಗ‌ಳ ಫೋನ್‌ ಪೇ, ಗೂಗಲ್‌ ಪೇಗಳ ಪಿನ್‌ ಕೋಡ್‌ ಬದಲಿಸಿ ಹಣ ದೋಚುತ್ತಿದ್ದ ಆರೋಪಿ ಬಂಧನ

0

ಬೆಂಗಳೂರು: ಕದ್ದ ಮೊಬೈಲ್‌ ಗ‌ಳ ಮೂಲಕ ಫೋನ್‌ ಪೇ, ಗೂಗಲ್‌ ಪೇಗಳ ಪಿನ್‌ ಕೋಡ್‌ ಬದಲಿಸಿ ಬ್ಯಾಂಕ್‌ ಖಾತೆಯಲ್ಲಿದ್ದ ಹಣ ದೋಚುತ್ತಿದ್ದ ಆರೋಪಿಯನ್ನು ರಾಮ ಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅವಲಹಳ್ಳಿ ನಿವಾಸಿ ವಿಘ್ನೇಶ್‌(27) ಬಂಧಿತ. ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ 38 ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

ಆರೋಪಿ ಈ ಫೋನ್‌ಗಳ ಮೂಲಕ ಲಕ್ಷಾಂತರ ರೂ. ದೋಚಿದ್ದಾನೆ ಎಂದು ಹೇಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆಂಧ್ರಪ್ರದೇಶದ ಚಿತ್ತೂರು ಮೂಲದ ವಿಘ್ನೇಶ್‌, ಪಿಯುಸಿ ಫೇಲ್‌ ಆಗಿದ್ದು, ನಗರದಲ್ಲಿ ಕೋರಿಯರ್‌ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ದಂಪತಿ ಅವಲಹಳ್ಳಿಯಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ಆರೋಪಿ ಆನ್‌ ಲೈನ್‌ ಬೆಟ್ಟಿಂಗ್‌ ಹಾಗೂ ಇಸ್ಪೀಟ್‌ ಆಟದ ಚಟ ಅಂಟಿಸಿಕೊಂಡಿದ್ದ. ಅದಕ್ಕಾಗಿ ಸಾವಿರಾರು ರೂ. ಸಾಲ ಮಾಡಿಕೊಂಡಿದ್ದಾನೆ.

ಒಂದು ವರ್ಷದ ಹಿಂದೆ ಒಂದು ಮೊಬೈಲ್‌ ಕದ್ದು, ಅದರ ಲಾಕ್‌ ತೆರೆದು ಫೋನ್‌ ಪೇ ಮೂಲಕ ಹಣ ದೋಚಿದ್ದ. ಈ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡ ಆರೋಪಿ, ಅಂದಿನಿಂದ ಬಿಎಂಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಮಹಿಳೆಯರು, ಇತರೆ ಪ್ರಯಾಣಿಕರ ಮೊಬೈಲ್‌ ಗ‌ಳನ್ನು ಕಳವು ಮಾಡುತ್ತಿದ್ದ.

3-4 ಮೊಬೈಲ್‌ಗ‌ಳನ್ನು ಕದ್ದು ಕೂಡಲೇ ತನ್ನ ಚಿತ್ತೂರಿಗೆ ತೆರಳುತ್ತಿದ್ದ. ಬಳಿಕ ಸ್ನೇಹಿತರ ಸಹಾಯದಿಂದ ಆ ಮೊಬೈಲ್‌ ನಲ್ಲಿದ್ದ ಸಿಮ್‌ ಕಾರ್ಡ್‌ ತೆಗೆದು, ಬೇರೊಂದು ಮೊಬೈಲ್‌ ಗೆ ಹಾಕಿ, ಫೋನ್‌ ಪೇ, ಗೂಗಲ್‌ ಪೇ ಪಿನ್‌ ಕೋಡ್‌ ಗಳನ್ನು ಬದಲಾಯಿಸುತ್ತಿದ್ದ. ಬಳಿಕ ಮೊಬೈಲ್‌ ನಂಬರ್‌ ಲಿಂಕ್‌ ಆಗಿರುವ ಬ್ಯಾಂಕ್‌ಗಳಲ್ಲಿರುವ ಹಣವನ್ನು ಪರಿಚಯಸ್ಥರ ಪೋನ್‌ ಪೇಗೆ ವರ್ಗಾವಣೆ ಮಾಡಿ, ಬಳಿಕ ಅವರಿಂದ ನಗದು ರೂಪದಲ್ಲಿ ಅವರಿಂದ ಹಣ ಪಡೆಯುತ್ತಿದ್ದ ಎಂದು ಆಯುಕ್ತರು ಹೇಳಿದರು.