ರಾಮನಗರ : ಬಿಡದಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 10ಕ್ಕೂ ಹೆಚ್ಚು ಕಳ್ಳತನ, ದರೋಡೆ ಕೇಸ್‌ನಲ್ಲಿ ಭಾಗಿಯಾಗಿದ್ದ 8 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸದ್ದಾಂ ಹುಸೇನ್, ಶಿವಪ್ರಸಾದ್, ಯಶವಂತ್ ಕುಮಾರ್.ಆರ್ ಎಂದು ಗುರುತಿಸಲಾಗಿದೆ.
ಒಟ್ಟು ನಾಲ್ವರು ಯುವಕರು ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರು ಬಾಲಕಿಯರ ಸಹ ಬಂಧಿಸಿದ್ದಾರೆ. ಆರೋಪಿಗಳು ನ.18ರಂದು ಆನ್‌ಲೈನ್‌ನಲ್ಲಿ ಕ್ಯಾಬ್ ಬುಕ್ ಮಾಡಿದ್ದರು. ಬಳಿಕ ನಿರ್ಜನ ಪ್ರದೇಶ ಬರುತ್ತಿದ್ದಂತೆ ಕಾರನ್ನು ನಿಲ್ಲಿಸುವಂತೆ ತಿಳಿಸಿದ್ದಾರೆ.
ರಾಡ್‌ನಿಂದ ಚಾಲಕನನ್ನು ಬೆದರಿಸಿ, ಆತನನ್ನು ಅಲ್ಲಿಯೇ ಇಳಿಸಿ, ಕಾರನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಚಾಲಕ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ದೂರಿನನ್ವಯ ತನಿಖೆಗಿಳಿದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇದೇ ರೀತಿ ಬಂಧಿತ ಆರೋಪಿಗಳು ಬಿಡದಿ, ಕನಕಪುರ, ಚನ್ನಪಟ್ಟಣ, ಮಳವಳ್ಳಿ, ಶಿವಮೊಗ್ಗ, ಶ್ರೀರಂಗಪಟ್ಟಣ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ, 10ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಬಂಧಿತರಿಂದ 3 ಕಾರು, 6 ಬೈಕ್, 1 ಆಟೋ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.














