ಮನೆ ಅಪರಾಧ ಆರ್‌ಪಿಎಫ್ ಸಿಬ್ಬಂದಿ ಹತ್ಯೆ ಪ್ರಕರಣದ ಆರೋಪಿ ಎನ್ ಕೌಂಟರ್ ನಲ್ಲಿ ಹತ್ಯೆ

ಆರ್‌ಪಿಎಫ್ ಸಿಬ್ಬಂದಿ ಹತ್ಯೆ ಪ್ರಕರಣದ ಆರೋಪಿ ಎನ್ ಕೌಂಟರ್ ನಲ್ಲಿ ಹತ್ಯೆ

0

ಲಖನೌ:  ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ ಇಬ್ಬರು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸಿಬ್ಬಂದಿಯ ಹತ್ಯೆ ಪ್ರಕರಣದ ಆರೋಪಿಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Our Whatsapp Group

ಸೋಮವಾರ ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಮದ್ಯ ಕಳ್ಳಸಾಗಣೆದಾರ ಮೊಹಮ್ಮದ್ ಜಾಹಿದ್ ಅಲಿಯಾಸ್ ಸೋನು ತೀವ್ರವಾಗಿ ಗಾಯಗೊಂಡಿದ್ದು, ಇಂದು ಮುಂಜಾನೆ ಗಾಜಿಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್) ನೋಯ್ಡಾ ಘಟಕ ಮತ್ತು ಸ್ಥಳೀಯ ಗಾಜಿಪುರ ಪೊಲೀಸ್ ತಂಡವು ಕಾರ್ಯಾಚರಣೆಯ ಭಾಗವಾಗಿತ್ತು ಎಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಬ್ ಯಶ್ ತಿಳಿಸಿದ್ದಾರೆ.

ಆಗಸ್ಟ್ 20ರಂದು ಅಕ್ರಮ ಮದ್ಯ ಸಾಗಾಟವನ್ನು ತಡೆಯಲು ಪ್ರಯತ್ನಿಸುತ್ತಿದ್ದ ವೇಳೆ ಬಾರ್ಮರ್ ಗುವಾಹಟಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆರ್‌ಪಿಎಫ್ ಕಾನ್‌ಸ್ಟೆಬಲ್‌ಗಳಾದ ಜಾವೇದ್ ಖಾನ್ ಮತ್ತು ಪ್ರಮೋದ್ ಕುಮಾರ್ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಯಶ್ ವಿವರಿಸಿದ್ದಾರೆ.

ಮದ್ಯ ಕಳ್ಳಸಾಗಣೆದಾರರು ಜಾವೇದ್ ಖಾನ್ ಮತ್ತು ಪ್ರಮೋದ್ ಕುಮಾರ್‌ರನ್ನು ಅಮಾನುಷವಾಗಿ ಥಳಿಸಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಎಸೆದಿದ್ದರು. ಇದರ ಪರಿಣಾಮವಾಗಿ ಅವರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ಆರ್‌ಪಿಎಫ್ ಕಾನ್‌ಸ್ಟೆಬಲ್‌ಗಳ ಹತ್ಯೆ ಪ್ರಕರಣದ ಪ್ರಮುಖ ಆರೋಪಿ 25 ವರ್ಷದ ಜಾಹಿದ್ ಅಲಿಯಾಸ್ ಸೋನು ಬಗ್ಗೆ ಸುಳಿವು ನೀಡಿದವರಿಗೆ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು.  ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿ ಈಗಾಗಲೇ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.