ಮಂಗಳೂರು: ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ನೈಜೀರಿಯಾದ ಮಹಿಳೆಯನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಆಕೆಯ ಬಳಿ ಇದ್ದ 20 ಲಕ್ಷ ರೂಪಾಯಿ ಮೌಲ್ಯದ 400 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ನೈಜೀರಿಯಾ ಮೂಲದ ಅಡೆವೊಲೆ ಅಡೆಟ್ಟು ಅಲಿಯಾಸ್ ರೆಜಿನಾ ಜಾರಾ ಅಲಿಯಾಸ್ ಆಯಿಷಾ (33) ಎಂದು ಗುರುತಿಸಲಾಗಿದ್ದು, ಸದ್ಯ ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿದ್ದಾರೆ.
ಬೆಂಗಳೂರಿನ ಅವರ ನಿವಾಸದಲ್ಲಿ ಸಿಸಿಬಿ ತಂಡ ಆಕೆಯನ್ನು ಬಂಧಿಸಿದೆ ಎಂದು ಪೊಲೀಸ್ ಮೂಲಗಳು ಭಾನುವಾರ ತಿಳಿಸಿವೆ. ಈಕೆ ಮಂಗಳೂರಿನಲ್ಲಿ ದಾಖಲಾಗಿರುವ ಏಳು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.
ಆರೋಪಿಯಿಂದ 20 ಲಕ್ಷ ಮೌಲ್ಯದ 400 ಗ್ರಾಂ ಎಂಡಿಎಂಎ, ಮೊಬೈಲ್ ಫೋನ್, 2,910 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಒಟ್ಟಾರೆ ಮೈಲ್ಯ 20,52,910 ರೂ. ಆಗಿದೆ.
ಆಯಿಷಾ ಅಧ್ಯಯನ ವೀಸಾದ ಮೇಲೆ ಭಾರತಕ್ಕೆ ಬಂದಿದ್ದು, ನರ್ಸ್ ಆಗಿಯೂ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಆಕೆ ಕೆಲಸ ಬಿಟ್ಟು ಎಂಡಿಎಂಎ ಮಾರಾಟ ಮಾಡುತ್ತಿದ್ದರು.
ಉಳ್ಳಾಲ, ಮಂಗಳೂರು ಉತ್ತರ, ಕಂಕನಾಡಿ, ಕೊಣಾಜೆ, ಸುರತ್ಕಲ್ ಮತ್ತು ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಏಳು ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಬಂಧಿತ ಆರೋಪಿಗಳು ಆಯಿಷಾ ಅವರಿಂದ ಮಾದಕ ದ್ರವ್ಯ ಖರೀದಿಸಿದ್ದರು. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ