ಮನೆ ಅಪರಾಧ ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ : 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ : 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

0

ಮೈಸೂರು: ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮನನ್ನು ವಿಜಯನಗರ ಠಾಣೆ ಪೋಲೀಸರು ಇತ್ತೀಚಿಗೆ ಬಂಧಿಸಿದ್ದಾರೆ.                      

Join Our Whatsapp Group

ಮೈಸೂರಿನ ಲಲಿತಾದ್ರಿಪುರಂನಲ್ಲಿ ಬಾಡಿಗೆ ಮನೆಯಲ್ಲಿದ್ದ ಬೆಂಗಳೂರು ರಾಮಚಂದ್ರಪುರದ ಮಂಜುನಾಥ ಅಲಿಯಾಸ್ ಕೋಳಿ ಫಯಾಜ್ ಅಲಿಯಾಸ್ ಅಭಿ (35) ಬಂದಿತನಾಗಿದ್ದು, ಈತನಿಂದ ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಭರಣ ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.                     

ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದೆರಡು ತಿಂಗಳಿನಿಂದ ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನವಾಗುತ್ತಿತ್ತು. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ. ರಮೇಶ್, ಅಪರಾಧ ಮತ್ತು ಸಂಚಾರ ವಿಭಾಗದ ಎಸಿಪಿ ಎಸ್. ಜಹ್ನಾವಿ ಅವರ ಗಮನಕ್ಕೆ ತಂದು ವಿಜಯನಗರ ವಿಭಾಗದ ಎಸಿಪಿ ಜಿ.ಎಸ್. ಗಜೇಂದ್ರ ಪ್ರಸಾದ್, ವಿಜಯನಗರ ಠಾಣೆ ಇನ್ಸ್ಪೆಕ್ಟರ್ ಬಿ.ಎಸ್. ರವಿಶಂಕರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಸೂಕ್ತ ಮಾರ್ಗದರ್ಶನ ನೀಡಿದ್ದರು.                       

ಬಳಿಕ ಕಾರ್ಯಾಚರಣೆ ಆರಂಭಿಸಿದ ವಿಶೇಷ ತಂಡ, ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿತು. ಲಭ್ಯವಾದ ತಾಂತ್ರಿಕ ಕುರುಹು  ಹಾಗೂ ಬಾತ್ಮಿದಾರರ ಮಾಹಿತಿ ಆಧರಿಸಿ ಜು.12ರಂದು ಬೆಳಗ್ಗೆ ಮೈಸೂರಿನಿಂದ ಹೊರಟ ವಿಶೇಷ ತಂಡ, ಬೆಂಗಳೂರು ಬನ್ನೇರುಘಟ್ಟ ಮುಖ್ಯ ರಸ್ತೆಯ ಕಮ್ಮನಹಳ್ಳಿ ಬಳಿಯ ನಿರ್ಮಾಣ ಹಂತದ ಲೇಔಟ್ ನಲ್ಲಿದ್ದ ಮಂಜುನಾಥ ಅಲಿಯಾಸ್ ಕೋಳಿ ಫಯಾಜ್ ನ ವಶಕ್ಕೆ ಪಡೆಯಿತು.                        

ನಂತರ ವಿಚಾರಣೆಗೆ ಒಳಪಡಿಸಿದಾಗ ಆತನ ವಿರುದ್ಧ ಬೆಂಗಳೂರು ನಗರದಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳಿದ್ದವು, 4 ತಿಂಗಳ ಹಿಂದೆಯೇ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಬಳಿಕ ತನ್ನ ದೃಷ್ಕೃತ್ಯಕ್ಕೆ ಮೈಸೂರಿಗೆ ಆಗಮಿಸಿದ ಲಲಿತಾದ್ರಿಪುರಂನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ. ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ 3 ಮನೆಗಳ ಬೀಗ ಹೊಡೆದು 190 ಚಿನ್ನ ಭರಣ ಹಾಗೂ 20 ಸಾವಿರ ಹಣ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರಿಗೆ ಗೊತ್ತಾಗಿದೆ.                        

ಕಳ್ಳತನ ಮಾಡಿದ್ದ ಚಿನ್ನಾಭರಣದಲ್ಲಿ 4 ಬಳೆಗಳನ್ನು ಕೋಲಾರದ ಚಿನ್ನದ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದ ಖದೀಮ, ಉಳಿದ ಆಭರಣಗಳನ್ನು ಮೈಸೂರಿನ ಬಾಡಿಗೆ ಮನೆಯಲ್ಲಿಟ್ಟಿದ್ದ. ಈ ಬಗ್ಗೆ ವಿಚಾರಣೆಯಲ್ಲಿ ಮಾಹಿತಿ ದೊರೆತ ಬಳಿಕ, ಎಲ್ಲಾ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.           

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ಬಿ.ಎಸ್. ರವಿಶಂಕರ್ ನೇತೃತ್ವದ ವಿಶೇಷ ತಂಡದಲ್ಲಿ ಸಬ್ ಇನ್ಸ್ಪೆಕ್ಟರ್ ಕೆ ವಿಶ್ವನಾಥ, ಅಶ್ವಿನಿ ಅನಂತಪುರ, ಸಿಬ್ಬಂದಿ ಶಂಕರ್, ಲೋಕೇಶ್, ಪ್ರದೀಪ್ ಕುಮಾರ್, ತಿಲಕ್ ಕುಮಾರ್, ಅಣ್ಣಪ್ಪ ನಂದಿಶ್,ಮಂಜುನಾಥ್ ,ಸಂಜಯ್ ಹಾಗೂ ಸಿ ಡಿ ಆರ್ ವಿಭಾಗದ ಕುಮಾರ್ ಇದ್ದರು.