ಬೆಂಗಳೂರು: ತಾನು ನೀಡಿದ್ದ ಹಣವನ್ನು ವಾಪಸ್ ಕೇಳಿದ ಹಿನ್ನೆಲೆಯಲ್ಲಿ ಬೆದರಿಕೆ ಮತ್ತು ಕಿರುಕುಳ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಮನನೊಂದು ಬಿಯರ್ ಗೆ ವಿಷ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಮೃತರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಂಡಿಗಾನಾಳ ಗ್ರಾಮದ ನಿವಾಸಿ ಬಿ. ಲಕ್ಷ್ಮೀನಾರಾಯಣ (58) ಎಂದು ಗುರುತಿಸಲಾಗಿದೆ. ಅವರ ಮೃತದೇಹ ಶುಕ್ರವಾರ ಬೆಳಗ್ಗೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.

ಈ ಸಂಬಂಧ ಮೃತರ ಪುತ್ರ ಮೋಹಂತಿ ನೀಡಿದ ದೂರಿನ ಮೇರೆಗೆ ರಾಜಕುಮಾರ್, ರಾಜು ಗೌಡ, ವೆಂಕಟರಮಣಪ್ಪ ಹಾಗೂ ಜಯಸುಧಾ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಸುಮಾರು ಆರು ತಿಂಗಳ ಹಿಂದೆ ಲಕ್ಷ್ಮೀನಾರಾಯಣ ಅವರು ತಮ್ಮ ಒಂದು ಎಕರೆ ಜಮೀನನ್ನು ರಾಜಕುಮಾರ್ ಅವರಿಗೆ 2.4 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಜಮೀನು ನೋಂದಣಿಗೆ ಮುನ್ನ 1.4 ಕೋಟಿ ರೂ. ಮುಂಗಡ ಹಣ ನೀಡಲಾಗಿದ್ದರೂ, ಉಳಿದ 1 ಕೋಟಿ ರೂ. ಪಾವತಿಸದೇ ವಿಳಂಬ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಇದರ ಜೊತೆಗೆ, ವೆಂಕಟರಮಣಪ್ಪ ಹಾಗೂ ಅವರ ಪತ್ನಿ ಜಯಸುಧಾ ಕೂಡ ಲಕ್ಷ್ಮೀನಾರಾಯಣ ಅವರಿಂದ ಸುಮಾರು 1 ಕೋಟಿ ರೂ. ಹಣ ಪಡೆದಿದ್ದರು ಎನ್ನಲಾಗಿದ್ದು, ಆ ಹಣವನ್ನು ವಾಪಸ್ ಕೇಳಿದಾಗ ಬೆದರಿಕೆ ಹಾಕಿ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆ ಸುಮಾರು 2 ಕೋಟಿ ರೂ. ಹಣವನ್ನು ಮರಳಿ ಪಡೆಯಲು ಸಾಧ್ಯವಾಗದೇ, ನಿರಂತರ ಒತ್ತಡ ಮತ್ತು ಬೆದರಿಕೆಗಳಿಂದ ಲಕ್ಷ್ಮೀನಾರಾಯಣ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಗುರುವಾರ ಮನೆಯಿಂದ ಹೊರಟಿದ್ದ ಲಕ್ಷ್ಮೀನಾರಾಯಣ ನಂತರ ಸಂಪರ್ಕಕ್ಕೆ ಸಿಗಲಿಲ್ಲ. ಬಳಿಕ ಅವರ ಮೃತದೇಹ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಪ್ರಕರಣದ ಕುರಿತು ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಅವರಿಂದ ಸ್ಪಷ್ಟನೆ ಪಡೆಯಲು ಮುಂದಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.














