ಮನೆ ಅಪರಾಧ ಕಳ್ಳತನದ ಮಾಹಿತಿ ನೀಡಿದ್ದಕ್ಕೆ ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ ಮಾಡಿದ ಆರೋಪಿಗಳು

ಕಳ್ಳತನದ ಮಾಹಿತಿ ನೀಡಿದ್ದಕ್ಕೆ ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ ಮಾಡಿದ ಆರೋಪಿಗಳು

0

ಶಹಾಪುರ: ಶನಿವಾರ(ನ.2) ಸಂಜೆ ತಾಲೂಕಿನ ದೋರನಹಳ್ಳಿ ಗ್ರಾಮ ಬಳಿ ಶಹಾಪುರ – ಯಾದಗಿರಿ ಹೆದ್ದಾರಿಯಲ್ಲಿ ವ್ಯಕ್ತಿಯೋರ್ವನ ಕಗ್ಗೊಲೆ ನಡೆದಿದ್ದು, ಕೊಲೆಯಾದ ವ್ಯಕ್ತಿ ತಾಲೂಕಿನ ಕನ್ಯಾಕೋಳೂರ ವ್ಯಾಪ್ತಿಯ ಜಾಪಾ ನಾಯಕ ತಾಂಡಾದ ನಿವಾಸಿ ತಿಪ್ಪಣ್ಣ ರಾಠೋಡ್(35) ಎಂದು ಗುರುತಿಸಲಾಗಿದೆ.

Join Our Whatsapp Group

ಆರೋಪಿಗಳು ಅದೇ ಜಾಪಾ ನಾಯಕ ತಾಂಡಾದ ನಿವಾಸಿಗಳಾಗಿದ್ದು, ಕುಮಾರ (36) ಹೇಮ್ಯಾ ಚವ್ಹಾಣ (36) ಹಾಗೂ ಲಕ್ಷ್ಮಣ ಚವ್ಹಾಣ (38) ಇವರೇ ಆರೋಪಿಗಳೆಂದು ಹೇಳಲಾಗಿದೆ.

ಹತ್ಯೆಯಾದ ತಿಪ್ಪಣ್ಣ ಅವರ ಪತ್ನಿ ಮಂಜುಳಾ ನಗರ ಠಾಣೆಗೆ ನೀಡಿದ ದೂರಿನನ್ವಯ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳ ವೃತ್ತಿ ಕಳ್ಳತನವಾಗಿದ್ದು, ಲಿಂಗಸೂಗೂರಿನಲ್ಲಿ ಕಳ್ಳತನ ಮಾಡಿ ತಾಂಡಾದಲ್ಲಿ ಭೂಗತವಾಗಿದ್ದ ಆರೋಪಿಗಳ ಬಗ್ಗೆ ಲಿಂಗಸೂಗೂರ ಪೊಲೀಸರಿಗೆ ಹತ್ಯೆಗೊಳಗಾದ ವ್ಯಕ್ತಿ ತಿಪ್ಪಣ್ಣ ರಾಠೋಡ್ ಮಾಹಿತಿ ನೀಡಿರುವ ಹಿನ್ನೆಲೆ ಆರೋಪಿಗಳು ಜೈಲು ಪಾಲಾಗಿದ್ದರು.

ಈಚೆಗೆ ಜೈಲಿನಿಂದ ಹೊರ ಬಂದ ಆರೋಪಿಗಳೇ ತಿಪ್ಪಣ್ಣನ ಮನೆಗೆ ತೆರಳಿ ವಾರ್ನಿಂಗ್ ಮಾಡಿದ್ದರಂತೆ, ಆಗ ಅಕ್ಕಪಕ್ಕ ತಾಂಡಾದ ಜನರು ಬುದ್ಧಿ ಹೇಳಿ ಗಲಾಟೆ ಬಿಡಿಸಿದ್ದರಂತೆ, ಆಗಲೇ ಆರೋಪಿಗಳು ನೀನು ಭೂಮಿ ಮೇಲೆ ಇದ್ದರೇತಾನೆ.? ಎಂದು ಬೆದರಿಕೆವೊಡ್ಡಿದ್ದರಂತೆ, ಹೀಗಾಗಿ ತನ್ನ ಪತಿಗೆ ಕಾಲ್ ಮಾಡಿ ಕರೆದು ಕುಡಿಸಿ ಹಿಂದಿನಿಂದ ಆರೋಪಿಗಳು ಮಾರಕಾಸ್ತ್ರದಿಂದ ಪತಿ ಮೇಲೆ ಹಲ್ಲೆ ನಡೆಸುವ ಮೂಲಕ ಕೊಂದು ಹಾಕಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ನ್ಯಾಯ ಒದಗಿಸಬೇಕೆಂದು ಪತ್ನಿ ಮಂಜುಳಾ ತಿಪ್ಪಣ್ಣ ರಾಠೋಡ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಅಲ್ಲದೆ ಆರೋಪಿಗಳ ಉದ್ಯೋಗವೇ ಕಳ್ಳತನವಾಗಿದ್ದು, ನನ್ನ ಪತಿ ಅವರ ಕಳ್ಳತನ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವದೇ ಮುಳುವಾಯಿತು. ಆರೋಪಿಗಳು ಕೋಪಗೊಂಡ ನನ್ನ ಪತಿಯನ್ನು ಕೊಂದಿದ್ದಾರೆ. ಪೊಲೀಸರು ನ್ಯಾಯ ಒದಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಎಸ್‍ಪಿ, ಅಧಿಕಾರಿಗಳ ಭೇಟಿ:

ಕೊಲೆ ನಡೆದ ಘಟನಾ ಸ್ಥಳಕ್ಕೆ ಶನಿವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಹಾಗೂ ಹೆಚ್ಚುವರಿ ಎಸ್ಪಿ ಧರಣೇಶ, ಡಿಎಸ್ಪಿ ಜಾವೀದ್ ಇನಾಂದಾರ ಹಾಗೂ ಸ್ಥಳೀಯ ಠಾಣೆಯ ಪಿಐ ಎಸ್.ಎಂ.ಪಾಟೀಲ್ ಭೇಟಿ ನೀರಿ ಪರಿಶೀಲಿಸಿದರು. ಅಲ್ಲದೆ ಇದೇ ವೇಳೆ ಘಟನೆ ಕುರಿತು ಪೊಲೀಸರಿಂದ ಎಸ್ಪಿ ಅವರು ಸಮರ್ಪಕ ಮಾಹಿತಿ ಪಡೆದುಕೊಂಡರು.

ಹತ್ಯೆಯಾದ ವ್ಯಕ್ತಿಯ ಬೈಕ್, ಮೊಬೈಲ್ ವಶಕ್ಕೆ

ಹತ್ಯೆಗೊಳಗಾದ ವ್ಯಕ್ತಿಯ ಬೈಕ್ ನಲ್ಲಿ ಸದಾ ಕೊಡಲಿ ಇರುತ್ತಿಂತೆ. ಕೊಲೆ ವೇಳೆ ತಿಪ್ಪಣ್ಣನ ಬೈಕ್ ನಲ್ಲಿ ಕೊಡ್ಲಿ ಇರುವುದು ಗಮನಿಸಬಹುದು. ಆ ಕೊಡ್ಲಿ ಸೇರಿದಂತೆ ಆತನ ಮೊಬೈಲ್ ಮತ್ತು ಬೈಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶನಿವಾರ ತಡ ರಾತ್ರಿವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹತ್ಯೆಯಾದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ಶವ ಸಂಸ್ಕಾರ ಮಾಡಲು ಒಪ್ಪಿಸಿದ್ದಾರೆ.

ತನಿಖೆ ಚುರುಕು

ಘಟನೆ ಕುರಿತು ಆರೋಪಿಗಳ ಬಂಧನಕ್ಕೆ ಪಿಐ ಎಸ್.ಎಂ.ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಕನ್ಯಾಕೋಳೂರ ವ್ಯಾಪ್ತಿಯ ಜಾಪಾ ನಾಯಾಕ ತಾಂಡಕ್ಕೆ ಭೇಟಿ ನೀಡಿ ಸಮರ್ಪಕ ಮಾಹಿತಿ ಕಲೆಹಾಕುತ್ತಿದೆ. ಅಲ್ಲದೆ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ಈಗಾಗಲೇ ಆರೋಪಿಗಳ ಮಾಹಿತಿ ದೊರೆತಿದ್ದು, ಶೀಘ್ರದಲ್ಲಿ ಬಂಧಿಸುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ.