ಬೆಂಗಳೂರು(Bengaluru)- 24 ವರ್ಷದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ 27 ವರ್ಷದ ಆರೋಪಿ ನಾಗೇಶ್ ಗಾಗಿ ನಗರ ಪೊಲೀಸರು ಬಲೆ ಬೀಸಿದ್ದು ಇನ್ನೂ ಪತ್ತೆಯಾಗಿಲ್ಲ.
ಘಟನೆ ನಡೆದು 5 ದಿನಗಳಾದರೂ ಆರೋಪಿಯ ಸುಳಿವೇ ಸಿಕ್ಕಿಲ್ಲ. ದೈವ ಭಕ್ತನಾಗಿರುವ ನಾಗೇಶ್ ಯಾವುದಾದರೂ ದೇವಸ್ಥಾನ ಸಮೀಪ ಅವಿತು ಕುಳಿತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ನಿಟ್ಟಿನಲ್ಲಿ ನಗರ ಪೊಲೀಸರ ತಂಡವನ್ನು ತಮಿಳು ನಾಡು, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಿಗೆ ಕಳುಹಿಸಲಾಗಿದೆ.
ಎಟಿಎಂ ಕಾರ್ಡ್ ಬಳಸಲು ಯತ್ನಿಸಿದರೆ ತನ್ನನ್ನು ಸುಲಭವಾಗಿ ಪೊಲೀಸರು ಪತ್ತೆ ಹಚ್ಚಬಹುದು ಎಂಬ ಅರಿವಿದ್ದ ಆರೋಪಿ ನಾಗೇಶ್ ಪರಾರಿಯಾಗುವ ಮುನ್ನ ತನ್ನೊಂದಿಗೆ ಸಾಕಷ್ಟು ಹಣವನ್ನು ತೆಗೆದುಕೊಂಡು ಹೋಗಿದ್ದ ಎಂಬ ಅಂಶವೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ತನ್ನ ಗಾರ್ಮೆಂಟ್ಸ್ ವ್ಯಾಪಾರವನ್ನು ಸ್ಥಗಿತಗೊಳಿಸಿದ ನಂತರ, ನಾಗೇಶ್ ತನ್ನ ಸ್ಟಾಕ್ ಅನ್ನು ಅಗ್ಗದ ದರಕ್ಕೆ ಮಾರಾಟ ಮಾಡಿದ್ದ.
ದಾಳಿಯ ಹಿಂದಿನ ರಾತ್ರಿ ನಾಗೇಶ್ ತನ್ನ ಸ್ನೇಹಿತರೊಬ್ಬರೊಂದಿಗೆ ಬಾರ್‌ಗೆ ಹೋಗಿ ಮಹಿಳೆಯ ಮೇಲೆ ಆ್ಯಸಿಡ್ ದಾಳಿ ಮಾಡುವ ಯೋಜನೆಯನ್ನು ಬಹಿರಂಗಪಡಿಸಿದ್ದನು. ಗುರುವಾರ ಬೆಳಿಗ್ಗೆ ಸುದ್ದಿ ನೋಡುವಂತೆಯೂ ಹೇಳಿದ್ದನು. ನಾಗೇಶ್ ಕಂಠಪೂರ್ತಿ ಕುಡಿದಿದ್ದರಿಂದ ಅವನ ಸ್ನೇಹಿತನು ಅವನ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆರೋಪಿಯ ಕರೆ ವಿವರಗಳ ಆಧಾರದ ಮೇಲೆ ವಿಚಾರಣೆಗೆ ಕರೆದ ಸಂದರ್ಭದಲ್ಲಿ ನಾಗೇಶ್ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.