ಕರ್ನಾಟಕ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಜಿ ನರೇಂದರ್ ಅವರನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ನಾಮನಿರ್ದೇಶನ ಮಾಡಿದ್ದಾರೆ.
ಕಾನೂನು ಸೇವೆಗಳ ಪ್ರಾಧಿಕಾರ ಕಾಯಿದೆ 1987ರ (ಕೇಂದ್ರ ಕಾಯಿದೆ 1987ರ ನಂ.39) ಸೆಕ್ಷನ್ 6ರ ಉಪ ಸೆಕ್ಷನ್ 2ರ ಕಲಂ ಬಿ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಿಗಳ ನಿಯಮಗಳು 1996ರ ನಿಯಮ 3ರ ಅಡಿ ಪ್ರದತ್ತವಾದ ಅಧಿಕಾರ ಬಳಸಿ ನ್ಯಾ. ಜಿ ನರೇಂದರ್ ಅವರನ್ನು 2023ರ ಜೂನ್ 1ರಿಂದ ಪೂರ್ವಾನ್ವಯವಾಗುವಂತೆ ಮತ್ತು ಮುಂದಿನ ಆದೇಶದವರೆಗೆ ಕೆಎಸ್ ಎಲ್ ಎಸ್ ಎ ಕಾರ್ಯಕಾರಿ ಅಧ್ಯಕ್ಷರನ್ನಾಗಿ ರಾಜ್ಯಪಾಲರು ನಾಮ ನಿರ್ದೇಶನ ಮಾಡಿದ್ದಾರೆ.
ಕೆಎಸ್ಎಲ್ಎಸ್ಎ ಕಾರ್ಯಕಾರಿ ಅಧ್ಯಕ್ಷರೂ ಆಗಿದ್ದ ನ್ಯಾಯಮೂರ್ತಿ ಬಿ ವೀರಪ್ಪ ಅವರು ಕಳೆದ ತಿಂಗಳು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಆ ಹುದ್ದೆ ತೆರವಾಗಿತ್ತು.
ನ್ಯಾ. ನರೇಂದರ್ ಅವರು 1964ರ ಜನವರಿ 10ರಂದು ಜನಿಸಿದ್ದು, ಕಲಾ ವಿಭಾಗದಲ್ಲಿ ಪದವಿ ಮತ್ತು ಕಾನೂನು ಪದವಿ ಪಡೆದಿದ್ದಾರೆ. 1989ರ ಆಗಸ್ಟ್ 23ರಂದು ತಮಿಳುನಾಡಿನ ವಕೀಲರ ಪರಿಷತ್ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ಅವರು ಮದ್ರಾಸ್ ಹೈಕೋರ್ಟ್ ನಲ್ಲಿ 1989-1992ರವರೆಗೆ ಪ್ರಾಕ್ಟೀಸ್ ಮಾಡಿದ್ದರು.
1993ರಲ್ಲಿ ಕರ್ನಾಟಕ ವಕೀಲರ ಪರಿಷತ್ ಗೆ ತಮ್ಮ ನೋಂದಣಿಯನ್ನು ವರ್ಗಾಯಿಸಿಕೊಂಡರು. 1996ರ ಜನವರಿ 1ರಿಂದ ಸಾಂವಿಧಾನಿಕ, ಸಿವಿಲ್, ತೆರಿಗೆ ಪ್ರಕರಣಗಳು (ಮೋಟಾರು ವಾಹನ ತೆರಿಗೆ ಮತ್ತು ಕಸ್ಟಮ್ಸ್), ಗಣಿಗಾರಿಕೆ ಕಾನೂನು, ಪರಿಸರ ಮತ್ತು ಅರಣ್ಯ ಪ್ರಕರಣ, ಮಧ್ಯಸ್ಥಿಕೆ, ಭೂ ಸುಧಾರಣೆ, ಭೂ ಕಂದಾಯ, ಸಿವಿಲ್ ದಾವೆಗಳು, ಎನ್ಐ ಕಾಯಿದೆ, ಬೌದ್ಧಿಕ ಆಸ್ತಿ ಹಕ್ಕು ಸೇರಿದಂತೆ ಬಹುತೇಕ ಎಲ್ಲಾ ರೀತಿಯ ಪ್ರಕರಣಗಳನ್ನೂ ಮುನ್ನಡೆಸಿದ್ದರು.
1982-83ರಲ್ಲಿ ಎನ್ ಸಿಸಿ ಅತ್ಯುತ್ತಮ ಕೆಡೆಟ್ ಪ್ರಶಸ್ತಿ ಪುರಸ್ಕೃತರಾದ ನ್ಯಾ. ನರೇಂದರ್ ಅವರು 1982-83ರಲ್ಲಿ ರಾಜ್ಯಮಟ್ಟದ ಜೂಡೋ ಚಾಂಪಿಯನ್ಷಿಪ್ ನಲ್ಲಿ ಸ್ವರ್ಣ ವಿಜೇತರೂ ಕೂಡ.
2015ರ ಜನವರಿ 2ರಂದು ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2017ರ ಡಿಸೆಂಬರ್ 30ರಂದು ಕಾಯಂಗೊಂಡರು.