ಮನೆ ಮನರಂಜನೆ ಕಲಾವಿದರ ಸಂಘದ ಜತೆ ಚರ್ಚಿಸಿದ ಬಳಿಕ ದರ್ಶನ್​​ ವಿರುದ್ಧ ಕ್ರಮ: ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

ಕಲಾವಿದರ ಸಂಘದ ಜತೆ ಚರ್ಚಿಸಿದ ಬಳಿಕ ದರ್ಶನ್​​ ವಿರುದ್ಧ ಕ್ರಮ: ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

0

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಕಲಾವಿದರ ಸಂಘದ ಜತೆ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಧ್ಯಕ್ಷ ಎನ್‌.ಎಂ ಸುರೇಶ್‌ ಬುಧವಾರದಂದು ತಿಳಿಸಿದ್ದಾರೆ.

Join Our Whatsapp Group

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ ನಂತರವೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ

ದರ್ಶನ್ ವಿರುದ್ಧ ಕೆಎಫ್‌ಸಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ತಮ್ಮನ್ನು ಭೇಟಿ ಮಾಡಿದ ಕೆಲ ಕನ್ನಡ ಪರ ಸಂಘಟನೆಗಳ ಸದಸ್ಯರಿಗೆ ಸುರೇಶ್ ಪ್ರತಿಕ್ರಿಯಿಸಿದರು.

ದರ್ಶನ್ ನಟನೆಯ ಸಿನಿಮಾಗಳನ್ನು ಬಿಡುಗಡೆ ಮಾಡಬಾರದು, ಅವರನ್ನು ಬಹಿಷ್ಕರಿಸಬೇಕು ಎಂಬ ಒತ್ತಾಯ ಕೇಳಿ ಬಂತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಲನಚಿತ್ರೋದ್ಯಮ ಮತ್ತು ಫೆಡರೇಶನ್ ​ನ “ಮೌನ”ವನ್ನೂ ಪ್ರಶ್ನಿಸಿದರು.

ದರ್ಶನ್​​​ ಅಭಿಮಾನಿಯಾಗಿದ್ದ 33ರ ಹರೆಯದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದರ್ಶನ್ ಹಾಗೂ ಅವರ 12 ಮಂದಿ ಸಹವರ್ತಿಗಳನ್ನು ಮಂಗಳವಾರದಂದು ಬಂಧಿಸಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಅವರು ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಅವರ ಸೋಷಿಯಲ್​ ಮೀಡಿಯಾ ಅಕೌಂಟ್​​ನ ಕಾಮೆಂಟ್​ ಸೆಕ್ಷನ್ ​ನಲ್ಲಿ ಪ್ರತಿಕ್ರಿಯಿಸಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಮೃತರು “ಅಸಭ್ಯ ಭಾಷೆ” ಬಳಸಿದ್ದಾರೆ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ ಎಂಬ ಆರೋಪಗಳಿವೆ.

ಮಾಧ್ಯಮದವರೊಂದಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ ಸುರೇಶ್‌ ಪ್ರತಿಕ್ರಿಯಿಸಿ, ಮೊದಲು ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲಿಚ್ಛಿಸುತ್ತೇವೆ. ಬೇಡಿಕೆಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ದಯವಿಟ್ಟು ಚಲನಚಿತ್ರ ವಾಣಿಜ್ಯ ಮಂಡಳಿ ಸುಮ್ಮನಿದೆ ಎಂದು ಹೇಳಬೇಡಿ. ಅದನ್ನು ಒಪ್ಪುವುದಿಲ್ಲ ಎಂದು ತಿಳಿಸಿದರು.

ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಕಾನೂನು ಪ್ರಕಾರ ಪ್ರಕರಣದ ಸೂಕ್ತ ತನಿಖೆ ನಡೆಸಿ ಸತ್ಯಾನುಸತ್ಯತೆಯನ್ನು ಹೊರತರುವುದಾಗಿ ಹೇಳಿದ್ದಾರೆ. ತಪ್ಪಿತಸ್ಥರನ್ನು ಕಾನೂನು ಪ್ರಕಾರ ನಿರ್ದಾಕ್ಷಣ್ಯವಾಗಿ ಶಿಕ್ಷಿಸಬೇಕು ಎಂದು ನಾವೂ ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.

ನಮಗೂ ಕೆಲವು ದೂರುಗಳು ಬಂದಿವೆ. ಆದರೆ ಅದಕ್ಕಾಗಿ ಕಲಾವಿದರ ಸಂಘ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ ಇರುವುದು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರಿಗಾಗಿ ಮಾತ್ರ. ಅದಾಗ್ಯೂ ನಾವು ಈ ಬಗ್ಗೆ ಪ್ರತಿಕ್ರಿಯಿಸಲು ಪ್ರಯತ್ನಿಸಿದ್ದೇವೆ. ನಾವು ಕಲಾವಿದರ ಸಂಘದೊಂದಿಗೆ ಮಾತನಾಡಿದ್ದೇವೆ. ಚರ್ಚೆಗೆ ನಾನು ಸಭೆ ಕರೆಯುತ್ತೇನೆ. ಪೊಲೀಸ್ ತನಿಖೆ ಮುಗಿದು, ಅವರು ಚಾರ್ಜ್ ಶೀಟ್ ಸಲ್ಲಿಸುವವರೆಗೂ ಆರೋಪಿಗಳು ಅಥವಾ ಅಪರಾಧಿಗಳು ಪತ್ತೆಯಾಗುವುದಿಲ್ಲ. ಪೊಲೀಸ್​, ಕಾನೂನು ಕ್ರಮ ಮುಗಿದ ನಂತರ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಮಗೂ ಜವಾಬ್ದಾರಿಗಳಿವೆ ಎಂದು ಹೇಳಿದರು.

ನಿರ್ಮಾಪಕ ಹಾಗೂ ಕೆಎಫ್‌ಸಿಸಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಕೂಡ ಈ ಹತ್ಯೆಯನ್ನು ಖಂಡಿಸಿದ್ದು, ರೇಣುಕಾಸ್ವಾಮಿ ಅವರ ಪೋಷಕರ ದುಃಖದಲ್ಲಿ ಎಲ್ಲರೂ ಅವರ ಜೊತೆ ನಿಲ್ಲಬೇಕು. ಇಂತಹ ಘಟನೆಗಳಿಂದ ಚಿತ್ರರಂಗದ ಖ್ಯಾತಿ ಕುಗ್ಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಯಾರೂ ಕಾನೂನಿಗಿಂತ ಮೇಲಲ್ಲ ಎಂದು ತಿಳಿಸಿದರು.

ಹಿಂದಿನ ಲೇಖನಮದುವೆ ಮುರಿದು ಬಿದ್ದರೆ ಅತ್ಯಾಚಾರ ಆರೋಪದಡಿ ವಿಚಾರಣೆ ಸಲ್ಲ: ಹೈಕೋರ್ಟ್‌
ಮುಂದಿನ ಲೇಖನಶಿವಮೊಗ್ಗ: ಚಿಕಿತ್ಸೆ ಫಲಿಸದೆ ಆರೋಗ್ಯ ಇಲಾಖೆ ಸಿಬ್ಬಂದಿ ಸಾವು- ಡೆಂಗ್ಯೂ ಶಂಕೆ