ಬೆಂಗಳೂರು(Bengaluru): ಕಾನೂನನ್ನು ಕೈಗೆ ತೆಗೆದುಕೊಳ್ಳುವ ಯಾರ ವಿರುದ್ಧವೇ ಆಗಲಿ ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಸಚಿವರು, ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಕೇವಲ ಅಪರಾಧಗಳ ಹಿನ್ನೆಲೆ ಮಾತ್ರ ಪರಿಗಣಿಸುತ್ತಾರೆಯೇ ವಿನಹ, ಅಲ್ಪಸಂಖ್ಯಾತ ಅಥವಾ ಬಹು ಸಂಖ್ಯಾತರು, ಜಾತಿ ಅಥವಾ ಧರ್ಮವನ್ನು ನೋಡಿ ಅಲ್ಲ ಎಂದು ತಿಳಿಸಿದರು.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಖಚಿತ ಮಾಹಿತಿ ಮೇರೆಗೆ ಎನ್ಐಎ ಸಿಬ್ಬಂದಿ ಹಲವು ಕಡೆ ಶೋಧ ನಡೆಸಿದ್ದಾರೆ. ಶಿವಮೊಗ್ಗ ಪೊಲೀಸರು ಇಬ್ಬರು ವ್ಯಕ್ತಿಗಳು ಭಯೋತ್ಪಾದಕಾ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ತನಿಖೆಯನ್ನು ಚುರುಕಿನಿಂದ ನಡೆಸಿರುವ ಶಿವಮೊಗ್ಗ ಪೊಲೀಸರ ಕಾರ್ಯಕ್ಷಮತೆಯ ಬಗ್ಗೆ ಅಭಿನಂದಿಸುತ್ತೇನೆ ಎಂದರು.
ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪೇ ಸಿಎಂ ಅಭಿಯಾನದ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ ಸಚಿವರು, ಜನರು ಪಕ್ಷದಿಂದ ದೂರವಾಗುತ್ತಿದ್ದು ಇದರಿಂದ ಹತಾಶರಾದ ಕಾಂಗ್ರೆಸ್ ನಾಯಕರು ಇಂತಹ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ನಾಯಕರೂ ಮಾಜಿ ವಿಧಾನಸಭಾ ಸ್ಪೀಕರ್ ಸಹ ಆಗಿದ್ದ, ಕಾಂಗ್ರೆಸ್ ನಾಯಕರ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಹೇಳಿದ್ದು, ಕಾಂಗ್ರೆಸ್ ನಾಯಕರ ಬಣ್ಣ ಬಯಲು ಮಾಡಿದ್ದಾರೆ ಎಂದರು.














