ಮನೆ ರಾಜಕೀಯ ಟೀಕೆ ಮಾಡಿದರೆ ಕ್ರಮ ಕೈಗೊಳ್ಳುವುದಿಲ್ಲ, ಆದರೆ ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಟೀಕೆ ಮಾಡಿದರೆ ಕ್ರಮ ಕೈಗೊಳ್ಳುವುದಿಲ್ಲ, ಆದರೆ ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

0

ಮಂಗಳೂರು: ಟೀಕೆ ಮಾಡಬಹುದು ಎಂದರೆ ಏನು ಬೇಕಾದರೂ ಹೇಳಬಹುದು ಎಂದರ್ಥವಲ್ಲ. ಟೀಕೆ ಬೇರೆ, ಸುಳ್ಳು ಸುದ್ದಿ ಹರಡುವುದು ಬೇರೆ, ವೈಯಕ್ತಿಕ ತೇಜೋವಧೆ ಬೇರೆ. ಟೀಕೆ ಮಾಡಿದರೆ ಕ್ರಮ ಕೈಗೊಳ್ಳುವುದಿಲ್ಲ. ಆದರೆ ಸುಳ್ಳು ಸುದ್ದಿ ಹರಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Join Our Whatsapp Group

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರವಾಸಕ್ಕಾಗಿ ಬಜಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಉಡುಪಿ ಕಾಲೇಜು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೊಲೀಸರು ಸುಮೋಟೋ ಎಫ್ ಐಆರ್ ಮಾಡಿದ್ದಾರೆ, ಡಿವೈಎಸ್ಪಿ ತನಿಖೆ ಆಗುತ್ತಿದೆ. ಅದು ಮೊದಲು ನಡೆಯಲಿ. ರಾಷ್ಟ್ರೀಯ ಮಹಿಳಾ ಆಯೋಗವೇ ಅಲ್ಲಿ ಕ್ಯಾಮರಾ ಇಟ್ಟಿರಲಿಲ್ಲ ಎಂದಿದ್ದಾರೆ. ತನಿಖಾ ವರದಿ ಬರಲಿ, ಆಮೇಲೆ ಈ ಬಗ್ಗೆ ಮಾತನಾಡುವ ಎಂದರು.

ಗೃಹ ಸಚಿವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಲೇಜ್‌ ನಲ್ಲಿ ಇರುವ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು ಎಂದು ಗೃಹ ಸಚಿವರು ಹೇಳಿರಬಹುದು. ಎಫ್ ಐಆರ್ ಆಗಿ ತನಿಖೆ ಆಗುತ್ತಿದೆ. ಡಿವೈಎಸ್ಪಿ ಮಟ್ಟದ ತನಿಖೆ ಆಗುತ್ತಿರುವವಾಗ ಎಸ್ ಐಟಿ ಪ್ರಶ್ನೆ ಉದ್ಭವಿಸಲ್ಲ ಎಂದರು.

ನೈತಿಕ ಪೊಲೀಸ್ ಗಿರಿ ಬಗ್ಗೆ ಉತ್ತರಿಸಿದ ಸಿಎಂ, ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಕೈಗೆತ್ತಿಕೊಳ್ಳಲು ಇಲ್ಲಿ ಯಾರಿಗೂ ಅವಕಾಶ ಇಲ್ಲ. ಪೊಲೀಸರಿಗೆ ಇದಕ್ಕೆ ಅವಕಾಶ ಕೊಡಬೇಡಿ ಎಂದಿದ್ದೇನೆ ಎಂದರು.

ಧರ್ಮಸ್ಥಳದ ಸೌಜನ್ಯ ಕೇಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕೇಸ್ ಸಿಬಿಐಗೆ ಕೊಟ್ಟಿತ್ತು, ಕೋರ್ಟಲ್ಲಿ ಇತ್ತು. ಅವರ ಪೋಷಕರು ‌ಮರು ತನಿಖೆಗೆ ಮನವಿ ಮಾಡಿದ್ದಾರೆ. ಕಾನೂನು ಪ್ರಕಾರ ಏನಾಗಬೇಕೆಂದು ನೋಡಿ ಮುಂದಿನ ನಿರ್ಧಾರ ಮಾಡುತ್ತೇವೆ. ನಾನು ಲಾಯರ್ ಆಗಿ ಹೇಳುವುದಾದರೆ ಇದರ ಬಗ್ಗೆ ಹೈಕೋರ್ಟ್ ಗೆ ಮೇಲ್ಮನವಿ ಹಾಕಬೇಕು. ನಾನು ಸಿಬಿಐ ಕೋರ್ಟ್ ಜಡ್ಜ್ ಮೆಂಟ್ ನೋಡಿಲ್ಲ. ಅದರ ಜಡ್ಜ್ ಮೆಂಟ್ ಓದಿ ನೋಡ್ತೇನೆ, ಅಪೀಲ್ ಗೆ ಅವಕಾಶ ಇದೆಯಾ ಎಂದು ನೋಡುತ್ತೇನೆ ಎಂದರು.

ಕಸ್ತೂರಿ ರಂಗನ್ ವರದಿಯ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಅದು ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು. ಆದರೆ ಪರಿಸರ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ಸ್ವಾಗತ ಕೋರಲಾಯಿತು. ಸಿದ್ದರಾಮಯ್ಯ ಅವರೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆಗಮಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್ ದೀಪ್ ಕುಮಾರ್ ಜೈನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಎಸ್ಪಿ ರಿಷ್ಯಂತ್, ಡಿಸಿಪಿ ಅನ್ಶುಕುಮಾರ್, ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.