ಬೆಂಗಳೂರು: ಪಕ್ಷವು ಗೆದ್ದಾಗ ನಮ್ಮನ್ನು ಎತ್ತಿ ಸಂಭ್ರಮಿಸುವ ಕಾರ್ಯಕರ್ತರಿಗೆ ಸೋತಾಗ ಪ್ರಶ್ನಿಸುವ ಹಕ್ಕೂ ಕೂಡ ಇದೆ ಎಂದು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ ಪಕ್ಷದ ಕಾರ್ಯಕರ್ತರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಇತರ ಉನ್ನತ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಂಡಿದೆ.
ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ನಮ್ಮ ಪರವಾಗಿ ಮತ ಕೇಳುವ, ಮನೆ ಮಠ ಬಿಟ್ಟು ಪಕ್ಷಕ್ಕಾಗಿ ದುಡಿಯುವ ಹಾಗೂ ಗೆದ್ದಾಗ ಹೊತ್ತು ಮೆರೆಯುವ ಕಾರ್ಯಕರ್ತನಿಗೆ ಪಕ್ಷ ಸೋತಾಗ ನಮ್ಮ ಮೇಲೆ ಸಿಟ್ಟನ್ನು ತೀಕ್ಷ್ಣವಾಗಿ ಹೊರಹಾಕುವ ಹಕ್ಕೂ ಇರುತ್ತದೆ. ಪಕ್ಷ ಸೋತು ಅನಾಥವಾಗಿರುವುದರಿಂದ ಅಪಾಯಕ್ಕೆ ಸಿಲುಕಿರುವುದು ಕಾರ್ಯಕರ್ತನೇ ಹೊರತು ಯಾವ ನಾಯಕನೂ ಅಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ಉಲ್ಲೇಖಿಸಿದ್ದಾರೆ.
ಮುಂದುವರಿದು, ಯಾರದ್ದೋ ವೈಯಕ್ತಿಕ ಮಹತ್ವಾಕಾಂಕ್ಷೆಯಿಂದ ಸೃಷ್ಟಿಯಾಗುವ ಷಡ್ಯಂತ್ರಕ್ಕೆ ಬಲಿಯಾಗುವುದು, ಯಾರ್ಯಾರನ್ನೋ ತೆಗಳುವುದು ಬೇಡ ಎಂದು ಕಾರ್ಯಕರ್ತರಿಗೂ ಮನವಿ ಮಾಡಿದ್ದಾರೆ.