ಬೆಂಗಳೂರು (Bengaluru): ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರು ತಮ್ಮ ಹೊಸ ಸಿನಿಮಾದಲ್ಲಿ ವಾರಿಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಟೀಸರ್‌ನಲ್ಲಿ ಇರುವಂತೆ ಅವರು ಭರ್ಜರಿ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
13 ಗೆಟ್‌ಅಪ್‌ಗಳಲ್ಲಿ ಅಭಿಷೇಕ್ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಸಾವಿರ ವರ್ಷದ ಹಿಂದೆ ನಡೆಯುವ ಕಥೆ ಇದಾಗಿದ್ದು, ಕರ್ನಾಟಕದ ಇತಿಹಾಸದ ಘಟನೆಗಳನ್ನು ಎತ್ತಿಕೊಂಡು ಕಥೆ ಹೆಣೆದಿದ್ದೇನೆ’ ಎಂದಿದ್ದಾರೆ ʻಅಯೋಗ್ಯ’ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್. ಮಹೇಶ್ ಕುಮಾರ್.
ಇದೊಂದು ಮಾಸ್ ಸಿನಿಮಾ ಆಗಲಿದೆ. ಈ ಪಾತ್ರಕ್ಕಾಗಿ ಈಗಾಗಲೇ ಅಭಿಷೇಕ್ ತಯಾರಿ ಆರಂಭಿಸಿದ್ದು, ಇದುವರೆಗೂ ಕಾಣಿಸಿಕೊಳ್ಳದ ರೀತಿಯಲ್ಲಿ ಅವರನ್ನು ನೋಡಬಹುದಂತೆ. ‘ಮೊದಲೇ ಹೇಳಿದಂತೆ ಇದೊಂದು ಐತಿಹಾಸಿಕ ಸಿನಿಮಾ. ಇದಕ್ಕಾಗಿ ನಾಯಕ ನಟ ಅಭಿಷೇಕ್ ತಯಾರಿ ಕೊಂಚ ಹೆಚ್ಚಾಗಿಯೇ ಇರುತ್ತದೆ. ಈಗಾಗಲೇ ಅವರು ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮುಗಿಸಿದ್ದು, ‘ಕಾಳಿ’ ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧವಾಗಿದ್ದಾರೆ. ಅದು ಮುಗಿದ ತಕ್ಷಣ ಅವರು ನನ್ನ ಚಿತ್ರಕ್ಕೆ ರೆಡಿಯಾಗುತ್ತಾರೆ. ಅಭಿಷೇಕ್ ಲುಕ್ ಮತ್ತು ಕಾಸ್ಟ್ಯೂಮ್ ಈ ಸಿನಿಮಾದ ಹೈಲೈಟ್ಸ್ ಎಂದಿದ್ದಾರೆ ನಿರ್ದೇಶಕರು.
ಇತ್ತೀಚೆಗೆ ಸಂಸದೆ, ನಟಿ ಸುಮಲತಾ ಅಂಬರೀಷ್ ಅವರ ಜನ್ಮದಿನದಂದು ಅಭಿಷೇಕ್ ಪಾತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಯಿತು. ‘ವರ್ಷಾಂತ್ಯದಲ್ಲಿ ಹೊಸ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, 18 ಸೆಟ್‌ಗಳಲ್ಲಿ ಸಂಪೂರ್ಣ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ.
ಇದು ಅಭಿಷೇಕ್ ಅವರ ನಾಲ್ಕನೇ ಚಿತ್ರ. ‘ಅಮರ್’ ಚಿತ್ರದ ಮುಖಾಂತರ ಚಂದನವನಕ್ಕೆ ಕಾಲಿಟ್ಟಿದ್ದ ಅಭಿಷೇಕ್, ಸದ್ಯ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ, ನಿರ್ದೇಶಕ ಕೃಷ್ಣ ಅವರ ಹೊಸ ಸಿನಿಮಾ ‘ಕಾಳಿ’ಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಳಿ ಸಿನಿಮಾ ಪೂರ್ಣಗೊಂಡ ಬಳಿಕ ಮಹೇಶ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.