ಬೆಂಗಳೂರು: ಕಳೆದ ಎರಡು ವರ್ಷಗಳಿಂದ ನಟ ದರ್ಶನ್ ಹಾಗೂ ಕನ್ನಡ ಮಾಧ್ಯಮಗಳ ನಡುವೆ ಉಂಟಾಗಿದ್ದ ಮನಸ್ತಾಪ ಕೊನೆಗೂ ಬಗೆಹರಿದಿದೆ.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಎಡಿಟರ್ಸ್ ಗಿಲ್ಡ್ ಆಫ್ ಬೆಂಗಳೂರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯಲಾಗಿದೆ.
ಕೆಲ ವರ್ಷಗಳ ಹಿಂದಿನ ನನ್ನ ಆಡಿಯೋ ಒಂದು ದುರುದ್ದೇಶಪೂರ್ವಕವಾಗಿ ವೈರಲ್ ಆಗಿ ಇಡೀ ವಿವಾದಕ್ಕೆ ಕಾರಣವಾಗಿತ್ತು. ಅದು ಯಾವುದೋ ವಿಷಮ ಘಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆಯಾಗಿತ್ತು. ಅದು ಮಾಧ್ಯಮದ ಇತರ ವ್ಯಕ್ತಿಗಳನ್ನು ಕುರಿತು ಆಡಿದ ಮಾತಾಗಿರಲಿಲ್ಲ. ಆ ವ್ಯಕ್ತಿ ಯಾವ ದುರುದ್ದೇಶದಿಂದ ಮಾಡಿದರು ಗೊತ್ತಿಲ್ಲ ಆದರೂ ಆ ವ್ಯಕ್ತಿಗೆ ಒಳ್ಳೆಯದಾಗಲಿ ಮುಂದೆ ಆ ವ್ಯಕ್ತಿ ಈರೀತಿಯ ದುರುದ್ದೇಶವನ್ನು ಮರುಕಳಿಸದಿರಲಿ.
ಆದರೂ ಅಂತಹ ಮಾತಿನಿಂದ ನೋವುಂಟಾಗಿದ್ದರೆ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರುವುದರಲ್ಲಿ ತಪ್ಪಿಲ್ಲ. ಈ ಅಯಾಚಿತ ಘಟನೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗದ ಕ್ಷಮೆ ಇರಲಿ ಎಂದು ನಟ ದರ್ಶನ್ ಹೇಳಿದರು.
ಸಾರ್ವಜನಿಕ ಜೀವನದಲ್ಲಿರುವ ಗಣ್ಯ ಹಾಗೂ ಜನಪ್ರಿಯ ವ್ಯಕ್ತಿಗಳು ನಡೆ ನುಡಿಯಲ್ಲಿ ಸಮಾಜಕ್ಕೆ ಮಾದರಿಯಾಗಿರಬೇಕು. ಮಾಧ್ಯಮ ಯಾರನ್ನೂ ದ್ವೇಷಿಸುವುದಿಲ್ಲ. ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕು ಎಂಬ ಅಭಿಪ್ರಾಯ ಸಂಪಾದಕರ ಸಭೆಯಲ್ಲಿ ವ್ಯಕ್ತವಾಯಿತು.
ಈ ವೇಳೆ ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸದ್ಯ ಕನ್ನಡ ಚಿತ್ರರಂಗ ಕಷ್ಟದಲ್ಲಿದೆ. ಹೊಸ ಕನಸಿನೊಂದಿಗೆ ಬರುತ್ತಿರುವ ನಿರ್ಮಾಪಕರ ಬೆಂಬಲಕ್ಕೆ ನಾವು ನಿಲ್ಲಬೇಕಿದೆ. ಪರಭಾಷಾ ಸಿನಿಮಾಗಳ ಎದುರು ನಮ್ಮ ಸಿನಿಮಾಗಳು ಗೆಲ್ಲಬೇಕಾದರೆ ಮಾಧ್ಯಮಗಳ ನೆರವು ಅಗತ್ಯವಾಗಿದೆ. ಕಳೆದ ಹಲವು ವರ್ಷಗಳಿಂದ ಮಾಧ್ಯಮ ಹಾಗೂ ಚಿತ್ರರಂಗ ಒಂದೇ ಕುಟುಂಬದಂತಿದೆ. ಇನ್ನು ಮುಂದೆಯೂ ಅದೇ ಮನೋಭಾವದೊಂದಿಗೆ ನಾವು ಮುಂದುವರೆಯೋಣ ಎಂದು ಹೇಳಿದರು.