ಬೆಂಗಳೂರು (Bengaluru)- ನಟ (Actor) ಡಾಲಿ ಧನಂಜಯ್ (Dolly Dhananjay) ಅವರು ರಾಜಕೀಯಕ್ಕೆ (politics) ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶಿವಲಿಂಗೇಗೌಡರ ಬದಲಿಗೆ ಅರಸೀಕೆರೆ ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರಾ ಧನಂಜಯ್? ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿ ಪ್ರಕಟಿಸಲಾಗಿದೆ.
ಈ ಸುದ್ದಿ ಹರಿದಾಡುತ್ತಿದ್ದಂತೆ ನೆಟ್ಟಿಗರು ರಾಜಕೀಯಕ್ಕೆ ಪ್ರವೇಶ ಮಾಡಬೇಡಿ. ಚಿತ್ರರಂಗದಲ್ಲೇ ಇದ್ದುಕೊಂಡು ಸಮಾಜಕ್ಕೆ ಉತ್ತಮ ಕೆಲಸ ಮಾಡಿ. ನೀವು ಮುಂದೆ ಕನ್ನಡ ಚಿತ್ರರಂಗದಲ್ಲಿ ರಾಜನ ಹಾಗೆ ಬೆಳೆಯುತ್ತೀರಾ. ನಿಮಗೆ ರಾಜಕೀಯ ಬೇಡ ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಈ ಸುದ್ದಿ ಶುದ್ಧ ಸುಳ್ಳು. ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಡಾಲಿ ಧನಂಜಯ್ ಅವರು ಇದೆಕ್ಕೆಲ್ಲ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಧನಂಜಯ್ ಅವರು ನಾನು ಶೂಟಿಂಗ್ ಅಲ್ಲಿ ಎಷ್ಟು ಮುಳುಗಿ ಹೋಗಿದ್ದೀನಿ ಅಂದ್ರೆ ನನಗೆ ಈ ತರಹ ಒಂದು ನ್ಯೂಸ್ ಆಗಿದೆ ಅನ್ನೋದೇ ಗೊತ್ತಾಗಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಈ ವಿಷಯಕ್ಕೂ ನನಗೂ, ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಕಲಾವಿದನಾಗಿ ಜನ ನನ್ನನ್ನ ಸ್ವೀಕರಿಸಿ ಅಪ್ಪಿದ್ದಾರೆ. ನೂರಾರು ಪಾತ್ರಗಳ ಮೂಲಕ ಅಭಿಮಾನಿ ದೇವರುಗಳ ರಂಜಿಸುವ ಕೆಲಸವಷ್ಟೇ ನನ್ನದು. ಸುಮ್ನೆ ಏನೇನೋ ಸುದ್ದಿ ಬರೆಯೋದು, ತೋರಿಸೋದು, ಕೇಳೋದು, ನೋಡೋದು, ನಂಬೋದು, ಎಲ್ಲ ಬಿಟ್ಟು ನಡೀರಿ.. ಏನಾರ ಒಂದಿಷ್ಟು ಒಳ್ಳೆ ಕೆಲಸ ಮಾಡೋಣ’’ ಎಂದು ನಟ ಧನಂಜಯ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಹಾಗೇ, ತಾವು ರಾಜಕೀಯಕ್ಕೆ ಧುಮುಕಲ್ಲ ಎಂದು ನಟ ಧನಂಜಯ್ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದಾರೆ.
ಸದ್ಯ ಧನಂಜಯ್ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ‘ಮಾನ್ಸೂನ್ ರಾಗ’, ‘ಹೆಡ್ ಬುಷ್’, ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’, ‘ಹೊಯ್ಸಳ’ ಮುಂತಾದ ಚಿತ್ರಗಳು ಡಾಲಿ ಕೈಯಲ್ಲಿವೆ.