ಕೆಲವು ಕಾರಣಗಳಿಂದ ‘ಸಹಾರಾ’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಕನ್ನಡದ ಈ ಸಿನಿಮಾದಲ್ಲಿ ಕ್ರೀಡಾ ಆಧಾರಿತ ಕಥೆ ಇದೆ. ಜೂನ್ 7ರಂದು ಈ ಸಿನಿಮಾ ತೆರೆ ಕಾಣಲಿದೆ. ‘ಸಹಾರಾ’ ಸಿನಿಮಾದಲ್ಲಿ ಸಾರಿಕಾ ರಾವ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ‘ಗೋಲ್ಡನ್ ಸ್ಟಾರ್’ ಗಣೇಶ್ ಅವರು ಈ ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡಿ, ಶುಭ ಕೋರಿದ್ದಾರೆ.
ಈ ಸಿನಿಮಾದ ಕಥೆಯ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಮಂಡ್ಯದ ಹುಡುಗಿಯೊಬ್ಬಳು ಕ್ರಿಕೆಟ್ ಆಟಗಾರ್ತಿ ಆಗುವ ಕನಸನ್ನು ಕಾಣುತ್ತಾಳೆ. ಆ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿ ಆಕೆಗೆ ಕೆಲವು ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನು ಮೀರಿ ಆಕೆ ಸಾಧನೆಯ ಮೆಟ್ಟಿಲು ಏರುತ್ತಾಳೆ. ಈ ಎಲ್ಲ ವಿವರಗಳನ್ನು ಎಳೆ ಎಳೆಯಾಗಿ ತೆರೆದಿಡಲಿದೆ ‘ಸಹಾರಾ’ ಸಿನಿಮಾ. ಆ ಕಾರಣದಿಂದ ಈ ಚಿತ್ರದ ಬಗ್ಗೆ ಸಿನಿಪ್ರೇಮಿಗಳಲ್ಲಿ ಕೌತುಕ ಮೂಡಿದೆ.
ಗಣೇಶ್ ಬಿಡುಗಡೆ ಮಾಡಿದ ಸಾಂಗ್ ಸದ್ದು ಮಾಡಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ‘ಸಹಾರಾ’ ಸಿನಿಮಾಗೆ ಮಂಜೇಶ್ ಭಗವತ್ ಅವರು ನಿರ್ದೇಶನ ಮಾಡಿದ್ದಾರೆ. ಅಂಕುಶ್ ರಜತ್ ಅವರು ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೂರಜ್ ಜೋಯಿಸ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಆಂಟೊನಿ ರುತ್ ವಿನ್ಸೆಂಟ್ ಅವರು ಮುಖ್ಯ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ವಿಜಯ್ ಎಂ. ಕುಮಾರ್ ಅವರ ಸಂಕಲನ ಈ ಸಿನಿಮಾಗಿದೆ.
‘ಸಹಾರಾ’ ಸಿನಿಮಾಗೆ ಅನೇಕರ ಬೆಂಬಲ ಸಿಕ್ಕಿದೆ. ಈ ಮೊದಲು ಕ್ರಿಕೆಟರ್ ಕೃಷ್ಣಪ್ಪ ಗೌತಮ್ ಅವರು ಈ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದರು. ಈ ಚಿತ್ರಕ್ಕೆ ಕಿಚ್ಚ ಸುದೀಪ್ ನಿರೂಪಣೆ ಮಾಡಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಡಿಜಿಟಲ್ನಲ್ಲಿ ಟ್ರೇಲರ್ ಅನಾವರಣ ಮಾಡಿದ್ದರು. ‘ಮಾ ಕ್ರಿಯೆಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದ್ದು, ಎಂ. ಗೌಡ ಬಂಡವಾಳ ಹೂಡಿದ್ದಾರೆ.














