ಮನೆ ರಾಜ್ಯ ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ನಟ ಕಿಚ್ಚ ಸುದೀಪ್

ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ನಟ ಕಿಚ್ಚ ಸುದೀಪ್

0

ಬೆಂಗಳೂರು(Bengaluru): ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ಯೋಜನೆಯ  ರಾಯಭಾರಿಯಾಗಿ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ನೇಮಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.

ಈ ಕುರಿತು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದಿರುವ ಪ್ರಭು ಚವ್ಹಾಣ್, ತಾವು ಈ  ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ, ಗೋಮಾತಾ ರಕ್ಷಣೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಿ, ಹೈನುಗಾರಿಕೆಗೆ ಉತ್ತೇಜನ ನೀಡಿ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈಜೋಡಿಸಿ, ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ತಮ್ಮ ಜನ್ಮದಿನದ  ಈ ಶುಭಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆ ಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ.

ಈ ಹಿಂದೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ನಟ ಸುದೀಪ್‌ ಅವರಿಗೆ ಪತ್ರ ಬರೆದು, ಪುಣ್ಯಕೋಟಿ ರಾಯಭಾರಿಯಾಗುವಂತೆ ಕೋರಿದ್ದರು. ಇದಕ್ಕೆ ಸುದೀಪ್ ಒಪ್ಪಿಕೊಂಡಿದ್ದಾರೆ. ಇಂದು ಅವರ ಜನ್ಮದಿನದ ಅಂಗವಾಗಿ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಿರುವ ಕುರಿತು ಅಧಿಕೃತವಾಗಿ ಪತ್ರ ಬರೆಯಲಾಗಿದೆ.

ಸುದೀಪ್ ಈ ಕೆಲಸಕ್ಕೆ ಯಾವುದೇ ಸಂಭಾವನೆ ಪಡೆಯದೇ ಗೋಸಂಪತ್ತಿನ ಸಂರಕ್ಷಣೆಗೆ ತಮ್ಮ ಸಣ್ಣದೊಂದು ಅಳಿಲು ಸೇವೆ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಹಿಂದಿನ ಲೇಖನಮುರುಘಾ ಮಠದ ಪ್ರಕರಣ: 2ನೇ ಆರೋಪಿ ವಾರ್ಡನ್ ಬಂಧನ
ಮುಂದಿನ ಲೇಖನಮಾದಾರ ಚನ್ನಯ್ಯ ಸ್ವಾಮೀಜಿ ಪೀಠತ್ಯಾಗಕ್ಕೆ ಒತ್ತಾಯ