ಅಮರಾವತಿ/ಹೈದರಾಬಾದ್: ತೆಲುಗು ಚಿತ್ರರಂಗದ ಜನಪ್ರಿಯ ನಟ ಮತ್ತು ಲೇಖಕ ಪೋಸಾನಿ ಕೃಷ್ಣ ಮುರಳಿ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೃಷ್ಣ ಮುರಳಿ (66) ಅವರನ್ನು ಹೈದರಾಬಾದ್‌ನಲ್ಲಿ ರಾತ್ರಿ 8.45 ಕ್ಕೆ ಬಂಧಿಸಲಾಗಿದೆ ಎಂದು ಅನ್ನಮಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಕೃಷ್ಣರಾವ್ ಪಿಟಿಐಗೆ ಖಚಿತಪಡಿಸಿದ್ದಾರೆ.
ಹೈದರಾಬಾದ್‌ನ ಯಲ್ಲರೆಡ್ಡಿಗುಡಾದ ನ್ಯೂ ಸೈನ್ಸ್ ಕಾಲೋನಿ ಬಳಿಯ ಅವರ ನಿವಾಸದಿಂದ ಪೊಲೀಸರು ನಟನನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಕೃಷ್ಣ ಮುರಳಿ ಅವರ ಪತ್ನಿಗೆ ನೀಡಿರುವ ಬಂಧನ ನೋಟಿಸ್ ಪ್ರಕಾರ, ಅವರನ್ನು ಬಿಎನ್‌ಎಸ್ ಸೆಕ್ಷನ್ 196,353 (2), ಮತ್ತು 111 ರೀಡ್ ಮತ್ತು ಬಿಎನ್‌ಎಸ್ಎಸ್‌ನ ಸೆಕ್ಷನ್ 47(1) ಮತ್ತು (2) ಅಡಿಯಲ್ಲಿ ಬಂಧಿಸಲಾಗಿದೆ.
ಆದರೆ, ನಟನ ಬಂಧನಕ್ಕೆ ಕಾರಣವೇನು ಎಂಬುದರ ಕುರಿತು ಹೆಚ್ಚಿನ ಸ್ಪಷ್ಟತೆ ಪೊಲೀಸರಿಂದ ನಿರೀಕ್ಷಿಸಲಾಗಿದೆ.
ಕೃಷ್ಣ ಮುರಳಿ ಮೇಲಿನ ಆರೋಪವು ಜಾಮೀನು ರಹಿತ ಸ್ವರೂಪದ್ದಾಗಿದ್ದು, ಅವರನ್ನು ರಾಜಂಪೇಟೆಯ 1ನೇ ಹೆಚ್ಚುವರಿ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸದ್ಯ ಪೊಲೀಸರು ನಟನನ್ನು ಆಂಧ್ರಪ್ರದೇಶಕ್ಕೆ ಶಿಫ್ಟ್ ಮಾಡುತ್ತಿದ್ದಾರೆ.
ಗನ್ನವರಂನ ಮಾಜಿ ಶಾಸಕ ಮತ್ತು ವೈಎಸ್‌ಆರ್‌ಸಿಪಿ ನಾಯಕ ವಲ್ಲಭನೇನಿ ವಂಶಿ ಬಂಧನದ ಬೆನ್ನಲ್ಲೇ ಕೃಷ್ಣ ಮುರಳಿ ಬಂಧನವಾಗಿದೆ.
ಕೃಷ್ಣ ಮುರಳಿ ಅವರು ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿಯೊಂದಿಗೆ ಗುರುತಿಸಿಕೊಂಡಿದ್ದು, ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ಆಂಧ್ರಪ್ರದೇಶ ಚಲನಚಿತ್ರ, ಟಿವಿ ಮತ್ತು ರಂಗಭೂಮಿ ಅಭಿವೃದ್ಧಿ ನಿಗಮದ (ಎಪಿಎಫ್‌ಟಿಟಿಡಿಸಿ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.