ಮನೆ ಸುದ್ದಿ ಜಾಲ ತಾಯಿಯ ಆಸೆಯಂತೆ ದೇವಾಲಯ ಪುನರ್ ನಿರ್ಮಿಸಿದ ನಟ ಪ್ರಭುದೇವ: ಮಲೆ ಮಹದೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ 25...

ತಾಯಿಯ ಆಸೆಯಂತೆ ದೇವಾಲಯ ಪುನರ್ ನಿರ್ಮಿಸಿದ ನಟ ಪ್ರಭುದೇವ: ಮಲೆ ಮಹದೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ 25 ಲಕ್ಷ ದೇಣಿಗೆ

0

ನಂಜನಗೂಡು: ಭಾರತೀಯ ಚಿತ್ರರಂಗದಲ್ಲಿ ‘ಮೈಕಲ್ ಜಾಕ್ಸನ್’ ಎಂದೆ ಪ್ರಸಿದ್ಧರಾದ ಖ್ಯಾತ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ, ತಾಯಿಯ ಇಚ್ಛೆಯಂತೆ ಮಲೆ ಮಹದೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಆಧ್ಯಾತ್ಮಿಕ ನುಡಿಗೆ ಜೀವ ತುಂಬಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ವರುಣಾ ಕ್ಷೇತ್ರದ ಕೆಂಬಾಲು ಗ್ರಾಮದ ಬಳಿ ಇರುವ ಶತಮಾನಗಳ ಹಳೆಯ ಮಲೆ ಮಹದೇಶ್ವರ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದರೂ ದೇವಾಲಯದ ಐತಿಹಾಸಿಕ ಮಹತ್ವವನ್ನು ಗಮನಿಸಿದ ಪ್ರಭುದೇವ, ತಾಯಿಯ ಆಸೆಯನ್ನು ಪೂರೈಸುವ ನಿಟ್ಟಿನಲ್ಲಿ ಸುಮಾರು ₹25 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಖರ್ಚು ಮಾಡಿ ದೇವಾಲಯವನ್ನು ನವೀಕರಿಸಿದ್ದಾರೆ.

ಈ ದೇವಸ್ಥಾನವು ಹೊಯ್ಸಳ ಕಾಲದ ಪುರಾತನ ದೇವಾಲಯವಾಗಿದ್ದು, ನಾಲ್ಕು ಎಕರೆ ಜಮೀನಿನಲ್ಲಿರುವ ಈ ಕ್ಷೇತ್ರದಲ್ಲಿ ಹಿಂದಿನ ಕಾಲದಲ್ಲಿ ಭಕ್ತರು ಮಳೆಗಾಗಿ ದೇವರಲ್ಲಿ ಎಡೆ ಸೇವೆ ಸಲ್ಲಿಸುತ್ತಿದ್ದ ಇತಿಹಾಸವಿದೆ. ಇಲ್ಲಿ ಬೆಳೆಯುತ್ತಿದ್ದ ತರಕಾರಿ ಹಾಗೂ ಧಾನ್ಯಗಳನ್ನು ದೇವರ ಮುಂದೆ ಸಮರ್ಪಿಸಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದರು. ಈ ಪೂಜೆಯ ನಂತರ ಮಳೆಯಾಗುತ್ತಿತ್ತು ಎನ್ನುವ ನಂಬಿಕೆ ಇದನ್ನು “ಮಳೆ ಮಹದೇಶ್ವರ ದೇವಾಲಯ” ಎಂದು ಪ್ರಸಿದ್ಧಗೆ ಮಾಡಿದೆ.

ಪ್ರಭುದೇವರ ತಾಯಿ ಮಹದೇವಮ್ಮ ಅವರು ಚೆನ್ನೈನಿಂದ ತವರು ಊರಾದ ಮೈಸೂರು ಜಿಲ್ಲೆಯ ದೂರ ಗ್ರಾಮಕ್ಕೆ ವಾಪಸ್ ಬಂದು ವಾಸಿಸುತ್ತಿದ್ದಾರೆ. ತಾವು ಒಂದು ವೇಳೆ ದೇವಾಲಯಕ್ಕೆ ಭೇಟಿ ನೀಡಿದಾಗ, ಅದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿ ಇರುವುದನ್ನು ಕಂಡು, ತಮ್ಮ ಮಗನಾದ ಪ್ರಭುದೇವನಿಗೆ ಜೀರ್ಣೋದ್ಧಾರ ಮಾಡುವ ಭಾರವನ್ನಿಟ್ಟಿದ್ದರು. ಮಗನಾದ ಪ್ರಭುದೇವ ಕೂಡ ತಾಯಿಯ ಮನವಿ ಕೈಗೆತ್ತಿಕೊಂಡು, ದೇವಾಲಯವನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸಿ ಹೊಸ ರೂಪವನ್ನಿತ್ತಿದ್ದಾರೆ.

ಜೀರ್ಣೋದ್ಧಾರಗೊಂಡ ದೇವಸ್ಥಾನದಲ್ಲಿ ಮಂಗಳವಾರದಿಂದಲೇ ಪೂಜಾ ಕೈಂಕರ್ಯ ಆರಂಭವಾಗಿದ್ದು, ಪ್ರಭುದೇವ ಅವರು ತಾವು ಉಪಸ್ಥಿತರಿದ್ದು ಗಣಪತಿ ಹೋಮ, ಗಂಗಾಪೂಜಾ, ಕಳಸಪೂಜೆ, ಮಹಾರುದ್ರಾಭಿಷೇಕ ಹಾಗೂ ಮಹಾಮಂಗಳಾರತಿಯಲ್ಲಿ ಭಾಗವಹಿಸಿದರು.

ಈ ಸಮಾರಂಭದಲ್ಲಿ ಪ್ರಭುದೇವರ ಪತ್ನಿ ಹಿಮಾನಿ, ತಾಯಿ ಮಹದೇವಮ್ಮ, ತಮ್ಮ ನಾಗೇಂದ್ರ ಪ್ರಸಾದ್, ಅಕ್ಕ ಭಾಗ್ಯ, ತಮ್ಮ ನಾಗಣ್ಣ, ಅವರ ಪತ್ನಿ ದೇವಮಣಿ ಗೀತಾ, ಶಿವರಾಜು ಸೇರಿದಂತೆ ಕುಟುಂಬದ ಎಲ್ಲರೂ ಭಾಗವಹಿಸಿದ್ದರು.

ಮಹದೇವಮ್ಮ ಮಾತನಾಡುತ್ತಾ, “ಈ ದೇವಾಲಯದಲ್ಲಿ ಒಂದು ಬಾರಿ ಸರ್ಪವನ್ನು ಕಣ್ಣಾರೆ ಕಂಡ ಅನುಭವದ ನಂತರ ದೇವಾಲಯ ಪುನರ್ ನಿರ್ಮಾಣದ ಆಸೆ ಜಾಗೃತವಾಯಿತು. ನನ್ನ ಮಗ ಪ್ರಭುದೇವ ಈ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದಾನೆ ಎಂಬುದು ನನಗೆ ಅತ್ಯಂತ ಸಂತೋಷ ತಂದಿದೆ” ಎಂದು ತಿಳಿಸಿದ್ದಾರೆ.

ಈ ಜೀರ್ಣೋದ್ಧಾರದ ಮೂಲಕ ಪ್ರಭುದೇವ ತಮ್ಮ ತಾಯಿಯ ಕನಸನ್ನು ನನಸುಮಾಡಿದ್ದು, ಸ್ಥಳೀಯರು ಹಾಗೂ ಭಕ್ತರ ನಡುವೆ ಶ್ಲಾಘನೀಯ ಪ್ರಶಂಸೆ ಗಳಿಸಿದ್ದಾರೆ.