ನಟ ರಕ್ಷಿತ್ ಶೆಟ್ಟಿಯವರ ಪರಂವಃ ಸ್ಟುಡಿಯೋಸ್ ನಿರ್ಮಿಸಿರುವ ‘ಮಿಥ್ಯ’ ಸಿನಿಮಾ ಮಾರ್ಚ್ 7 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಮಿಧುನ್ ಮುಕುಂದನ್ ಅವರ ಸಂಗೀತ ಸಂಯೋಜನೆಯಿದ್ದು, ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸುಮಂತ್ ಭಟ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಮತ್ತು ‘ವಿಕ್ರಾಂತ್ ರೋಣ’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್ ಶೆಟ್ಟಿ ‘ಮಿಥ್ಯ’ ಚಿತ್ರದಲ್ಲಿ ಮಿಥುನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಪ್ರಕಾಶ್ ತೂಮಿನಾಡ್ ಮತ್ತು ರೂಪ ವರ್ಕಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಚಿತ್ರವು ತನ್ನ ಹೆತ್ತವರನ್ನು ಕಳೆದುಕೊಂಡ 11 ವರ್ಷದ ಬಾಲಕನ ಕಥೆಯಾಗಿದೆ. ತನ್ನ ತಂದೆ-ತಾಯಿಯನ್ನು ಕಳೆದುಕೊಂಡು, ಆ ನೋವಿನಿಂದ ಹೊರಬರಲಾರದ ಬಾಲಕ, ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ‘ಮಿಥ್ಯ’.
ಚಿತ್ರದ ನಿರ್ದೇಶಕ ಸುಮಂತ್ ಭಟ್ ಮಾತನಾಡಿ, ‘ಯುವ ದಂಪತಿ ಅಗಲುವಿಕೆ, ಇಬ್ಬರು ಮಕ್ಕಳನ್ನು ಅನಾಥರನ್ನಾಗಿ ಮಾಡುವುದು, ಆಲೋಚನೆಗಳ ಸರಮಾಲೆಯನ್ನು ಪ್ರಚೋದಿಸಿತು. ಚಿಕ್ಕ ಮಕ್ಕಳು ಹೇಗೆ ಸಮಾಧಾನಗೊಳ್ಳುತ್ತಾರೆ? ಗಾಯಗಳು ಎಷ್ಟು ದಿನಗಳಿಗೆ ವಾಸಿಯಾಗುತ್ತವೆ? ಮಕ್ಕಳು ಹೇಗೆ ದುಃಖಿಸುತ್ತಾರೆ? ಇವುಗಳಿಗೆ ಉತ್ತರ ಹುಡುಕುವ ಪ್ರಯತ್ನವೇ ಮಿಥ್ಯ’ ಎಂದಿದ್ದಾರೆ.
ನಿರ್ಮಾಪಕ ರಕ್ಷಿತ್ ಶೆಟ್ಟಿ ಮಾತನಾಡಿ, ‘ನಮ್ಮ ಉದ್ಯಮಕ್ಕೆ ಎಲ್ಲ ರೀತಿಯ ಚಿತ್ರಗಳು ಬೇಕು. ನಾವು ಹೊಸ ಕಥೆಗಳು ಮತ್ತು ಕ್ಷೇತ್ರಕ್ಕೆ ಹೊಸ ದೃಷ್ಟಿಕೋನಗಳನ್ನು ತರುವ ಹೊಸ ಕಾಲದ ಕಥೆಗಾರರನ್ನು ಸ್ವಾಗತಿಸಬೇಕಾಗಿದೆ. ಪರಂವಃ ಸ್ಟುಡಿಯೋಸ್ ನಿರೂಪಣೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಕಂಟೆಂಟ್‌ನೊಂದಿಗೆ ತನ್ನನ್ನು ಗುರುತಿಸಿಕೊಳ್ಳಳು ಬಯಸುತ್ತದೆ. ಈ ನಿಟ್ಟಿನಲ್ಲಿ ಮಿಥ್ಯ ಒಂದು ಸುಂದರ ಪ್ರಯತ್ನವಾಗಿದೆ’ ಎಂದು ಹೇಳಿದರು.
ಚಿತ್ರಕ್ಕೆ ಉದಿತ್ ಖುರಾನಾ ಅವರ ಛಾಯಾಗ್ರಹಣ ಮತ್ತು ಶ್ರೀಯಾಂಕ್ ನಂಜಪ್ಪ ಅವರ ಧ್ವನಿ ವಿನ್ಯಾಸವಿದೆ.