ಗದಗ: ನಟ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುವಾಗ ವಿದ್ಯುತ್ ತಗುಲಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.
ಹನಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಮೃತಪಟ್ಟವರು. ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ನಟ ಯಶ್ ಅವರ ಹುಟ್ಟುಹಬ್ಬ ಹಿನ್ನಲೆ ನೀಲಗಿರಿ ತೋಪಿಗೆ ಬ್ಯಾನರ್ ಕಟ್ಟಿ ಮೇಲೆತ್ತುವ ವೇಳೆ ವಿದ್ಯುತ್ ತಗುಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದಾರೆ. ಸೂರಣಗಿ ಗ್ರಾಮದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮೂವರ ಅಂತ್ಯಕ್ರಿಯೆಗೆ ಸಿದ್ದತೆ ನಡೆಸಲಾಗುತ್ತಿದೆ.
ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಹಾಗೂ ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ. ಸಾವಗೀಡಾದ ಯುವಕರ ಸಾಮೂಹಿಕ ಅಂತ್ಯಕ್ರಿಯೆ ನಡೆಯುತ್ತಿದ್ದು ಇದರ ಮಧ್ಯೆ ಕುಟುಂಬಸ್ಥರು, ಇಡೀ ಗ್ರಾಮದ ಜನ ಕಣ್ಣೀರ ಕೋಡಿಯಲ್ಲಿ ಮುಳುಗಿಹೋಗಿದ್ದಾರೆ. ಬಡ ಕುಟುಂಬದ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಕುಟುಂಬದ ಜೀವನಕ್ಕೆ ಆಧಾರವಾಗಿದ್ದ ಯುವಕರು ಹಠಾತ್ತನೆ ತೀರಿಹೋಗಿದ್ದು ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ.














