ನಟ ವಿಜಯ್ ನೃತ್ಯ ಕೌಶಲ್ಯ ಹೊಗಳುವ ಭರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಕೋಪಕ್ಕೆ ತುತ್ತಾದ ನಟಿ ಕೀರ್ತಿ ಸುರೇಶ್, ಇದೀಗ ಮೆಗಾಸ್ಟಾರ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ. ಚಿರಂಜೀವಿ ಹಾಗೂ ಅವರ ಅಭಿಮಾನಿಗಳಿಗೆ ನನ್ನಿಂದ ಬೇಸರವಾಗಿದ್ರೆ ಕ್ಷಮೆ ಕೇಳುತ್ತೇನೆ. ಯಾವತ್ತೂ ನಾನು ಅವರಿಗೆ ಅಗೌರವ ತೋರಿಸಿಲ್ಲ. ಈ ಇಬ್ಬರು ಲೆಜೆಂಡ್ ನಾಯಕರನ್ನು ಎಂದಿಗೂ ಹೋಲಿಸಲು ಸಾಧ್ಯವಿಲ್ಲ’ ಎಂದು ನಟಿ ಕೀರ್ತಿ ಸುರೇಶ್ ಹೇಳಿದ್ದಾರೆ.
ರಿವಾಲ್ವರ್ ರೀಟಾ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಕೀರ್ತಿ ಸುರೇಶ್ ಮಾಧ್ಯಮವೊಂದರ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇ ಈ ಮಹಾ ಎಡವಟ್ಟಿಗೆ ಕಾರಣವಾಗಿದೆ. ಕೀರ್ತಿ ಉತ್ತರದಿಂದ ಚಿರಂಜೀವಿ ಅಭಿಮಾನಿಗಳು ಬೇಸರಗೊಂಡಿದ್ದು, ಕೀರ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂದರ್ಶನದಲ್ಲಿ ದಳಪತಿ ವಿಜಯ್ ಹಾಗೂ ಚಿರಂಜೀವಿ ಇವರಿಬ್ಬರಲ್ಲಿ ಯಾರು ಉತ್ತಮ ಡ್ಯಾನ್ಸರ್ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಕೀರ್ತಿ ಇಬ್ಬರಲ್ಲಿ ದಳಪತಿ ವಿಜಯ್ ಉತ್ತಮ ಡಾನ್ಸರ್ ಎಂದಿದ್ದಾರೆ. ಇದೇ ಉತ್ತರ ಚಿರಂಜೀವಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ನಟಿ ಕೀರ್ತಿ ಸುರೇಶ್ ಇಬ್ಬರೂ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಬ್ಬರೂ ಡಾನ್ಸಿಂಗ್‌ನಲ್ಲಿ ಪಂಟರು. ಹೀಗಾಗಿ ಸಂದರ್ಶನದಲ್ಲಿ ಎದುರಾದ ಟ್ರಿಕ್ಕಿ ಪ್ರಶ್ನೆಗೆ ಕೀರ್ತಿ ಉತ್ತರಿಸಿ ವಿಜಯ್ ಬೆಸ್ಟ್ ಡಾನ್ಸರ್ ಎಂದು ಉತ್ತರಿಸಿ ತಮ್ಮ ಕಾಲಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ.
ವಿವಾದದ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಕೀರ್ತಿ ಕ್ಷಮೆ ಕೇಳಿ ಕ್ಲಾರಿಫಿಕೇಷನ್ ನೀಡಿದ್ದಾರೆ. ವಿಜಯ್ ಜೊತೆ ತಾವು ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋದ್ರಿಂದ ಆ ಒಡನಾಟದಲ್ಲಿ ವಿಜಯ್‌ರನ್ನು ಆರಿಸಿಕೊಂಡಿದ್ದೆ. ಮೆಗಾಸ್ಟಾರ್ ಓರ್ವ ಲೆಜೆಂಡ್. ಅವರಿಗೆ ಸರಿಸಾಟೆಯೇ ಇಲ್ಲ. ನನ್ನ ಮಾತಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳುವ ಮೂಲಕ ವಿವಾದಕ್ಕೆ ನಟಿ ಕೀರ್ತಿ ತೆರೆ ಎಳೆದಿದ್ದಾರೆ.














