ಮೈಸೂರು: ನಗರದ ಎನ್ ಟಿಎಂ ಶಾಲೆ ಉಳಿಸಿ ಒಕ್ಕೂಟದ ಕಾರ್ಯಕರ್ತರು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಚಲನಚಿತ್ರ ನಟಿ ರಚಿತಾ ರಾಮ್ ಬೆಂಬಲ ಸೂಚಿಸಿದ್ದಾರೆ.
ಪ್ರತಿ ಮಂಗಳವಾರ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿ ಕರಪತ್ರ ಚಳುವಳಿ ನಡೆಸುತ್ತಿರುವ ಒಕ್ಕೂಟದ ಸದಸ್ಯರು ಇಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಕರಪತ್ರ ಚಳುವಳಿ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟಿ ರಚಿತಾ ರಾಮ್ ಅವರಿಗೂ ಸಹ ಕಾರ್ಯಕರ್ತರು ಕರಪತ್ರ ನೀಡಿದರು. ಅದನ್ನು ಓದಿದ ರಚಿತಾ ರಾಮ್ ಅವರು ಒಂದು ಕನ್ನಡ ಶಾಲೆಯ ಉಳಿವಿಗಾಗಿ ನಿರಂತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಒಕ್ಕೂಟದ ಸಂಚಾಲಕರಾದ ಎಂ.ಮೋಹನ್‌ಕುಮಾರ್ ಗೌಡ, ತಮ್ಮ ಚಳುವಳಿಗೆ ಪೂರಕವಾಗಿ ನಿಂತು ರಾಜ್ಯಮಟ್ಟದ ಶೋಗಳಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಈ ವಿಷಯ ಪ್ರಸ್ತಾಪಿಸುವ ಮೂಲಕ ಬೆಂಬಲ ನೀಡುವಂತೆ ಮನವಿ ಮಾಡಿದಾಗ ಅದಕ್ಕೆ ರಚಿತಾ ರಾಮ್ ಅವರು ಪೂರಕ ಬೆಂಬಲ ನೀಡುವುದಾಗಿ ತಿಳಿಸಿದರು.
ಇಂದಿನ ಪ್ರತಿಭಟನೆ ಹಾಗೂ ಕರಪತ್ರ ಚಳುವಳಿಯಲ್ಲಿ ಒಕ್ಕೂಟದ ಸದಸ್ಯರಾದ ಹೆಚ್.ಸಿ.ಗೋವಿಂದರಾಜು, ಎಂ.ಎನ್.ಸ್ವಾಮಿಗೌಡ, ಹೆಚ್.ಸ್ವಾಮಿ, ಜೆ.ಉಮೇಶ್, ಎಲ್‌ಐಸಿ ಸಿದ್ದಪ್ಪ, ಟಿ.ರವಿಗೌಡ, ಟಿ.ರವೀಂದ್ರ, ಉಮೇಶ್, ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.