ಮನೆ ಮನರಂಜನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ರಶ್ಮಿ ಪ್ರಭಾಕರ್‌ ಮದುವೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ರಶ್ಮಿ ಪ್ರಭಾಕರ್‌ ಮದುವೆ

0

ಬೆಂಗಳೂರು (Bengaluru)- ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್‌ (Rashmi Prabhakar) ಅವರು ತಮ್ಮ ಬಹುಕಾಲದ ಗೆಳೆಯ ನಿಖಿಲ್‌ ಭಾರ್ಗವ (Nikhil Bhargava) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ರಶ್ಮಿ ಪ್ರಭಾಕರ್‌-ನಿಖಿಲ್‌ ಭಾರ್ಗವ ಸತಿಪತಿಗಳಾಗಿದ್ದಾರೆ. ಗುರು-ಹಿರಿಯರ, ಆಪ್ತರ ಸಮ್ಮುಖದಲ್ಲಿ ವಿವಾಹ ನೆರವೇರಿದೆ.

ಸಾಂಪ್ರದಾಯಿಕವಾಗಿ ಮದುವೆಯಾಗಲು ರಶ್ಮಿ ನಿರ್ಧಾರ ಮಾಡಿದ್ದರಿಂದ ಆರತಕ್ಷತೆ ಕಾರ್ಯಕ್ರಮ ಇರಲಿಲ್ಲ. ವಿವಾಹಕ್ಕೆ ನಟ ಚಂದನ್‌ ಗೌಡ-ನಟಿ ಕವಿತಾ ಗೌಡ ದಂಪತಿ, ನೇಹಾ ಗೌಡ, ಕಾವ್ಯಾ ಶಾಸ್ತ್ರಿ ಸುಜಯ್ ಹೆಗಡೆ, ರೋಶನಿ ತೆಂಡೂಲ್ಕರ್ ಮುಂತಾದವರು ಭಾಗವಹಿಸಿ ವಧು-ವರರಿಗೆ ಶುಭಹಾರೈಸಿದರು.

ಮೂರು ವರ್ಷಗಳಿಂದ ನಿಖಿಲ್ ಹಾಗೂ ರಶ್ಮಿ ಸ್ನೇಹಿತರಾಗಿದ್ದರು. ಈ ಹಿಂದೆ ನಿಖಿಲ್ ಚಾನೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಿಶ್ಚಿತಾರ್ಥ ಆಗುವವರೆಗೂ ರಶ್ಮಿ ಪ್ರಭಾಕರ್ ಹುಡುಗನ ವಿಚಾರವನ್ನು ಎಲ್ಲಿಯೂ ಬಹಿರಂಗ ಮಾಡಿರಲಿಲ್ಲ. ವಿಶಿಷ್ಟವಾಗಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ, ಸೋಶಿಯಲ್ ಮೀಡಿಯಾದಲ್ಲಿ ಕುತೂಹಲ ಹುಟ್ಟುಹಾಕುವ ರೀತಿ ಪೋಸ್ಟ್ ಹಾಕಿ ನಿಖಿಲ್ ಫೋಟೋ ರಿವೀಲ್ ಮಾಡಿದ್ದರು.

ಕಳೆದ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಇದೀಗ ಮದುವೆಯಾಗಿದ್ದಾರೆ. ಹೊಸ ಬಾಳ ಪಯಣಕ್ಕೆ ಕಾಲಿಟ್ಟಿದ್ದಾರೆ.

ಜೀವನಚೈತ್ರ, ಶುಭವಿವಾಹ, ಮನಸೆಲ್ಲಾ ನೀನೇ, ಮಹಾಭಾರತ, ದರ್ಪಣ, ತಮಿಳಿನ ಅರುಂಧತಿ, ತೆಲುಗಿನ ಪೌರ್ಣಮಿ, ಕಾವ್ಯಾಂಜಲಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಸದ್ಯ ಅವರು ತೆಲುಗಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮನಸೆಲ್ಲಾ ನೀನೆ ಧಾರಾವಾಹಿಯನ್ನು ಕೆಲ ಕಾರಣಗಳಿಂದ ಬಿಟ್ಟ ನಂತರದಲ್ಲಿ ಅವರು ಪರಭಾಷೆಯಲ್ಲಿಯೇ ಬ್ಯುಸಿಯಾಗಿದ್ದಾರೆ.