ಮೈಸೂರು : ಹಿರಿಯ ಕಲಾವಿದ ಪಿ.ಆರ್.ತಿಪ್ಪೇಸ್ವಾಮಿರವರ ನೆನಪಿನ ಅಂಗವಾಗಿ ಪ್ರತಿ ವರ್ಷದಂತೆ ಮೈಸೂರಿನಲ್ಲಿ “ಪಿ.ಆರ್.ತಿಪ್ಪೇಸ್ವಾಮಿ ಕಲಾಸಂಭ್ರಮ-೨೦೨೫ ಮತ್ತು ಪಿಆರ್‌ಟಿ ಕಲಾಪ್ರಶಸ್ತಿ ಪ್ರದಾನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಟ್ರಸ್ಟ್ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.
ಈ ಬಾರಿ ಬೆಂಗಳೂರಿನ ಹಿರಿಯ ಚಿತ್ರಕಲಾವಿದರಾದ ಸುಧಾಮನೋಹರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮುಖವೀಣೆ ಅಂಜನಪ್ಪ ಅವರನ್ನು ಪಿಆರ್‌ಟಿ ಕಲಾಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷ ಚಿತ್ರಕಲೆ ಮತ್ತು ಜಾನಪದ ಕಲೆಗೆ ಪಿಆರ್‌ಟಿ ಕಲಾಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ತಲಾ ೨೫,೦೦೦/- ನಗದು, ಪ್ರಶಸ್ತಿಪತ್ರ, ಪ್ರಶಸ್ತಿಫಲಕ, ಹಾಗೂ ಫಲತಾಂಬೂಲ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಸುಧಾ ಮನೋಹರ್‌ರವರು ಮೂಲತಃ ಧಾರಾವಾಡದವರು, ಬೆಂಗಳೂರಿನ ಪ್ರತಿಷ್ಠಿತ ಕಲಾಕಾಲೇಜಾದ ಚಿತ್ರಕಲಾ ಪರಿಷತ್‌ನಲ್ಲಿ ಹಾಗೂ ಸ್ವಿಜರ್ಲ್ಯಾಂಡ್‌ನಲ್ಲಿ ಕಲಾಶಿಕ್ಷಣ ಮುಗಿಸಿ, ನಂತರ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. ಮುಖವೀಣೆ ಅಂಜನಪ್ಪನವರು ಚಿಕ್ಕಬಳ್ಳಪುರದ ದಪ್ಪರ್ತಿ ಗ್ರಾಮದವರು. ಜನಪದ ಕಲಾಪ್ರಕಾರದ ಮುಖವೀಣೆ ವಾದನವನ್ನು ಶಾಸ್ತ್ರೀಯವಾಗಿ ನುಡಿಸುವ ಮೂಲಕ ಜಾನಪದ ಹಿನ್ನಲೆಯ ವಾದ್ಯಕ್ಕೆ ವಿಶೇಷ ಸ್ಥಾನ ಕಲ್ಪಿಸಿಕೊಟ್ಟವರು. ರಂಗಗೀತೆ, ಬಯಲಾಟ, ಚಲನಚಿತ್ರ ಗೀತೆಗಳನ್ನು ಸುಲಲಿತವಾಗಿ ನುಡಿಸಬಲ್ಲವರಾಗಿದ್ದು, ಏಕಕಾಲದಲ್ಲಿ ಐದು ವಾದನಗಳನ್ನು ನುಡಿಸಿ ನೋಡಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.
ಮುಂದಿನ ತಿಂಗಳು ನಡೆಯುವ “ಪಿ.ಆರ್.ತಿಪ್ಪೇಸ್ವಾಮಿ ಕಲಾಸಂಭ್ರಮ-೨೦೨೫ ಮತ್ತು ಪಿಆರ್‌ಟಿ ಕಲಾ ಪ್ರಶಸ್ತಿ ಪ್ರದಾನ” ಕಾರ್ಯಕ್ರಮದಲ್ಲಿ ಇವರಿಬ್ಬರಿಗೂ ಪಿಆರ್‌ಟಿ ಕಲಾಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಟ್ರಸ್ಟ್‌ನ ಅಧ್ಯಕ್ಷ ರಾಜಶೇಖರಕದಂಬ, ಕಾರ್ಯದರ್ಶಿ ಕೆ.ಸಿ. ಮಹದೇವಶೆಟ್ಟಿ ಹಾಗೂ ನಿರ್ದೇಶಕರಾದ ಹೆಚ್.ಆರ್. ಚಂದ್ರಶೇಖರಯ್ಯ, ಮೈಲಹಳ್ಳಿ ರೇವಣ್ಣ ಉಪಸ್ಥಿತರಿದ್ದರು.














