ಮೈಸೂರು: ಮೈಸೂರಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಶಾಖಾಮಠದ ಆಶ್ರಯದಲ್ಲಿ ಜಿಲ್ಲೆಯ ೧೯ಪ್ರೌಢಶಾಲೆಗಳ ೮೦೦ವಿದ್ಯಾರ್ಥಿಗಳು ೨೦೨೪-೨೫ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಿದ್ದು, ಈ ವಿದ್ಯಾರ್ಥಿಗಳ ಪೈಕಿ ೮೦ ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ ಹಾಗೂ ೧೧೪ ವಿದ್ಯಾರ್ಥಿಗಳು ಉನ್ನತ ದರ್ಜೆ ತೇರ್ಗಡೆಯಾಗಿದ್ದರು. ಅತ್ಯುತ್ತಮ ಅಂಕಗಳಿಸಿ ಶಾಲೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಕುವೆಂಪು ನಗರದ ಶ್ರೀ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಬಿಜಿಎಸ್ ಶಿಕ್ಷಣ ಸಂಸ್ಥೆಯು ಹಲವಾರು ವರ್ಷಗಳಿಂದ ರಾಜ್ಯಾದ್ಯಂತ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾ ಬಂದಿದ್ದು, ಪ್ರತಿ ವರ್ಷವೂ ಕೂಡ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ. ಅದೇ ರೀತಿ ಈ ವರ್ಷವೂ ಸಹ ಸಾಕಷ್ಟು ವಿದ್ಯಾರ್ಥಿಗಳು ೬ ನೂರಕ್ಕೂ ಹೆಚ್ಚು ಅಂಕಗಳಿಸಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅವರು ಉತ್ತಮ ಜೀವನ ಕಟ್ಟಿಕೊಳ್ಳಲು ಶ್ರೀ ಕಾಲಭೈರವೇಶ್ವರ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಆಶೀರ್ವಾದ ಅವರಿಗೆ ಲಭಿಸಲಿ, ನಾಡಿಗೆ ಉತ್ತಮ ಪ್ರಜೆಗಳಾಗಿ ಉತ್ತಮ ಜೀವನ ಕಟ್ಟಿಕೊಳ್ಳಲಿ ಎಂದು ಶುಭ ಹಾರೈಸಿದರು.
ಈ ವೇಳೆ ಶಾಸಕ ಕೆ.ಹರೀಶ್‌ಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದೇರ್ಶಕ ಎಸ್.ಟಿ.ಜವರೇಗೌಡ, ಬಿಜಿಎಸ್ ಪದವಿಪೂರ್ವ ಮತ್ತು ಪದವಿ ಕಾಲೇಜು ಆಡಳಿತಾಧಿಕಾರಿ ನರಸೇಗೌಡ, ಬಿ.ಜಿ.ಎಸ್. ಸಂಸ್ಕೃತ ಪಾಠಶಾಲೆ ಮುಖ್ಯಸ್ಥ ಪ್ರಕಾಶ್, ಬಿಜಿಎಸ್ ಶಾಲೆಯ ಆಡಳಿತಾಧಿಕಾರಿ ಯಶೋಧ, ಪ್ರಾಂಶುಪಾಲೆ ಉಷಾ ಸೇರಿ ಇನ್ನಿತರರು ಉಪಸ್ಥಿತರಿದ್ದರು.














