ಆದಷ್ಟು ಬೇಗ ದರ್ಶನ್ ಅವರಿಗೆ ಜಾಮೀನು ಸಿಗಲಿ ಅಂತ ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ದರ್ಶನ್ ಗೆ ಇಂದು (ಸೆಪ್ಟೆಂಬರ್ 30) ಬೇಲ್ ಸಿಗಬಹುದು ಎಂದು ಆಪ್ತರು ನಿರೀಕ್ಷಿಸಿದ್ದರು.
ಆದರೆ ಅವರ ಜಾಮೀನು ಅರ್ಜಿ ವಿಚಾರಣೆ ದಿನಾಂಕವನ್ನು ಮುಂದೂಡಲಾಗಿದೆ. ಅಕ್ಟೋಬರ್ 4ರಂದು ಬೇಲ್ ಅರ್ಜಿ ವಿಚಾರಣೆ ನಡೆಯಲಿದೆ. ವಾದ ಮಂಡನೆಗೆ ಕಾಲಾವಕಾಶ ಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತ್ಯವಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಆದ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಯಿತು. ಕೇಸ್ ಗೆ ಸಂಬಂಧಿಸಿದಂತೆ ಕೆಲವು ಅನುಮಾನಗಳು ಇದ್ದಿದ್ದರಿಂದ ದರ್ಶನ್ ಪರ ವಕೀಲರು ಬಳ್ಳಾರಿ ಜೈಲಿಗೆ ಭೇಟಿ ನೀಡಿ ಮಾತುಕಥೆ ನಡೆಸಿ ಬಂದಿದ್ದರು. ಈಗ ವಾದಮಂಡನೆಗೆ ಕಾಲಾವಕಾಶ ಬೇಕು ಎಂದು ದರ್ಶನ್ ಪರ ವಕೀಲ ಸುನೀಲ್ ಅವರು ಕೋರಿದ್ದಾರೆ.
ಸೆಷನ್ಸ್ ನ್ಯಾಯಾಲಯದಲ್ಲೇ ದರ್ಶನ್ಗೆ ಜಾಮೀನು ಸಿಗಲಿದೆ ಎಂದು ದರ್ಶನ್ ಪರ ವಕೀಲರು ಇತ್ತೀಚೆಗೆ ಭರವಸೆ ವ್ಯಕ್ತಪಡಿಸಿದ್ದರು. ಒಂದು ವೇಳೆ ಸೆಷನ್ಸ್ ಕೋರ್ಟ್ ನಲ್ಲಿ ಬೇಲ್ ಸಿಗದಿದ್ದರೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗುವುದು. ದರ್ಶನ್ಗೆ ಜಾಮೀನು ಕೊಡಿಸಲು ಪತ್ನಿ ವಿಜಯಲಕ್ಷ್ಮಿ ಅವರು ಕಷ್ಟಪಡುತ್ತಿದ್ದಾರೆ. ದರ್ಶನ್ ನಟಿಸಬೇಕಿದ್ದ ಸಿನಿಮಾಗಳ ಕೆಲಸಗಳು ನಿಂತಲ್ಲೇ ನಿಂತಿವೆ. ಇತ್ತೀಚೆಗೆ ‘ಡೆವಿಲ್: ದಿ ಹೀರೋ’ ಸಿನಿಮಾ ತಂಡದವರು ಬಳ್ಳಾರಿ ಜೈಲಿಗೆ ಹೋಗಿ ಬಂದಿದ್ದರು.
ಇದೇ ಪ್ರಕರಣದಲ್ಲಿ ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್ ಹಾಗೂ ನಿಖಿಲ್ ನಾಯಕ್ ತುಮಕೂರು ಜೈಲಿನಲ್ಲಿ ಇದ್ದಾರೆ. ಈ ಮೂವರಿಗೆ ಒಂದು ವಾರದ ಹಿಂದೆಯೇ ಜಾಮೀನು ನೀಡಲಾಗಿತ್ತು. ಆದರೆ ಇಷ್ಟು ದಿನ ಕಳೆದರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಜಾಮೀನಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಈ ಮೂವರು ಇನ್ನೂ ಕೂಡ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಬಿಡುಗಡೆ ಮಾಡಲು ಶ್ಯೂರಿಟಿ ಸಮಸ್ಯೆ ಆಗುತ್ತಿದೆ ಎನ್ನಲಾಗಿದೆ.