ಮನೆ ರಾಜ್ಯ ಮಹಾನ್ ವ್ಯಕ್ತಿಗಳ ತತ್ವಾದರ್ಶ ಅಳವಡಿಸಿಕೊಂಡರೆ ಅದೇ ಸಂವಿಧಾನ: ಸಚಿವ ಎಸ್ ಮಧು ಬಂಗಾರಪ್ಪ

ಮಹಾನ್ ವ್ಯಕ್ತಿಗಳ ತತ್ವಾದರ್ಶ ಅಳವಡಿಸಿಕೊಂಡರೆ ಅದೇ ಸಂವಿಧಾನ: ಸಚಿವ ಎಸ್ ಮಧು ಬಂಗಾರಪ್ಪ

0

ಶಿವಮೊಗ್ಗ : ಕನಕದಾಸರ ಕೀರ್ತನೆಗಳು ಸೇರಿದಂತೆ ಮಹಾನ್‍ವ್ಯಕ್ತಿಗಳ ತತ್ವಾದರ್ಶಗಳನ್ನು ಅಳವಡಿಸಿಕೊಂಡು ನಡೆದರೆ ಅದೇ ನಮ್ಮ ಸಂವಿಧಾನ ಎಂದು  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುರುಬರ ಸಂಘ, ಶಿವಮೊಗ್ಗ ಇವರುಗಳು ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಕ್ಷಾತೀತ ಆಡಳಿತಕ್ಕೆ ಸ್ಪೂರ್ತಿ ಕನಕದಾಸರಂತಹವರು. 16 ನೇ ಶತಮಾನದಲ್ಲೇ ಜಾತಿ ಮತ, ಧರ್ಮವನ್ನು ದೂರ ತಳ್ಳಿ, ಸಮಾನತೆ ಸಾರಿದ ಇವರಿಗೆ ಮುಂದಾಲೋಚನೆ ಹೆಚ್ಚಿತ್ತು. ಅವರ ‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’ ಎಂಬ ಪದ್ಯ ಇಂದಿಗೂ ಪ್ರಸ್ತುತವಾಗಿದೆ. ನಾವ್ಯಾರೂ ಇಂತಹ ಜಾತಿಯಲ್ಲಿಯೇ ಹುಟ್ಟುತ್ತೇವೆಂದು ಅರ್ಜಿ ಹಾಕಿರುವುದಿಲ್ಲ ಎಂದರು.

ದೈವಭಕ್ತಿಯಿಂದ ಶ್ರೀಕೃಷ್ಣನನ್ನೇ ಒಲಿಸಿಕೊಂಡ ಕನಕದಾಸರ ಕೊಡುಗೆ ಅಪಾರವಾಗಿದ್ದು, ಅವರು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ. ಮಾನ್ಯ ಮುಖ್ಯಮಂತ್ರಿಗಳು ಸಹ ಕಾಗಿನೆಲೆ ಕನಕಪೀಠದಲ್ಲಿ ಇದನ್ನೇ ಹೇಳಿದ್ದಾರೆ. ಯಾವುದೇ ಜಾತಿ ಇರಲಿ ಅದು ಒಂದು ತಾಯಿಯಂತೆ. ನಾವು ಬೇರೆ ಜಾತಿಗಳನ್ನು ಗೌರವಿಸಿದರೆ ನಮ್ಮ ತಾಯಿಯನ್ನು ಗೌರವಿಸಿದಂತೆ. ಅತಿಯಾದ ಜಾತಿ-ಧರ್ಮ ಮಾಡಬಾರದು. ಕನಕದಾಸರು, ಬಸವಣ್ಣ, ನಾರಾಯಣಗುರು ಹೀಗೆ ಹಿರಿಯರ ಜೀವನಾದರ್ಶಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತೇನೆ ಎಂದರು.

ಶಿಕ್ಷಣ ನೀಡುವುದು ದೇವರ ಕೆಲಸವಿದ್ದಂತೆ, ಎಲ್ಲರಿಗೂ ಸಮಾನವಾದ ಶಿಕ್ಷಣ ನೀಡುವುದು ನಮ್ಮ ಕರ್ತವ್ಯವಾಗಿದ್ದು, ಅಂತಹ ಶಿಕ್ಷಣವನ್ನು ನೀಡುತ್ತೇವೆ ಎಂದ ಅವರು ಶಿವಮೊಗ್ಗದಲ್ಲಿ ಕುರುಬರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ತರಲು ಸಮಾಜದವರೇ ಆದ ನಗರಾಭಿವೃದ್ದಿ ಸಚಿವರು ಹಾಗೂ ತಾವು ಶ್ರಮಿಸುತ್ತೇವೆ. ಹಾಗೆಯೇ ಸಮಾಜದ ಮುಖಂಡರು ಸಹ ಪ್ರಯತ್ನಿಸಬೇಕೆಂದು ತಿಳಿಸಿದರು.

ಡಿವಿಎಸ್ ಪದವಿಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಕೆ.ಭಾಸ್ಕರ್ ಕನಕದಾಸರ ಜೀವನ, ತತ್ವ, ಕೀರ್ತನೆ, ಗಾಯನದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಶ್ರೀಕನಕದಾಸರ ಜೀವನಚರಿತ್ರೆ ಆಧರಿಸಿದ ಯಕ್ಷಗಾನ ಪ್ರದರ್ಶನ ನಡೆಯಿತು.

ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಿ ಮೈಲಾರಪ್ಪ, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್, ಸಮಾಜದ ಮುಖಂಡರಾದ ನರೇಂದ್ರಬಾಬು,ಎಸ್.ಕೆ.ಮರಿಯಪ್ಪ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್,  ಜಿ.ಪಂ. ಸಿಇಓ ಲೋಖಂಡೆ ಸ್ನೇಹಲ್ ಸುಧಾಕರ್, ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಸಮಾಜದ ಮುಖಂಡರು, ಉಪಸ್ಥಿತರಿದ್ದರು.

ಹಿಂದಿನ ಲೇಖನಹೆಣ್ಣು ಭ್ರೂಣ ಹತ್ಯೆ ಕರಾಳ ದಂಧೆ ಕೋರರಿಗೆ ಶಿಕ್ಷೆಯಾಗಲಿ:ಕೆ.ನಾಗಣ್ಣಗೌಡ
ಮುಂದಿನ ಲೇಖನಚಾಮರಾಜನಗರ: ಒಂದು ತಿಂಗಳ ಹಿಂದೆ ಮದುವೆಯಾಗಿದ್ದ ಯುವಕ ಆತ್ಮಹತ್ಯೆ