ದೇವತ್ಕಲ್: ಈಗಾಗಲೇ ಗುಜರಾತಿನಲ್ಲಿ ಭಗವದ್ಗೀತೆ ಅಳವಡಿಕೆ ಮಾಡಲಾಗಿದ್ದು, ಇದರಿಂದ ಮಕ್ಕಳಲ್ಲಿ ನೈತಿಕತೆ ಬೆಳೆಯಲಿದೆ ಎಂದು ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆಗೆ ಪರೋಕ್ಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದ ಹೆಲಿಪ್ಯಾಡ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ ಗುಜರಾತ್ ರಾಜ್ಯದಲ್ಲಿ ಆಗಿದೆ. ಭಗವದ್ಗೀತೆ ಅಳವಡಿಸಿದರೇ ಮಕ್ಕಳಿಗೆ ಅನುಕೂಲವಾಗುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಲ್ಲಿ ನೈತಿಕತೆ ಬೆಳೆಸುವುದು ಅಗತ್ಯವಿದೆ. ಹೀಗಾಗಿಯೇ ಈ ವಿಚಾರದಲ್ಲಿ ಅನಗತ್ಯವಾಗಿ ಗೊಂದಲ ಮೂಡಿಸಬಾರದು ಎಂದರು.
ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೇ ಬೌದ್ಧಿಕ ಮಟ್ಟ ಸುಧಾರಣೆ ಆಗುತ್ತದೆ. ಇದರಲ್ಲಿ ತಪ್ಪು ಏನಿದೆ. ನಮ್ಮಲ್ಲಿಯೂ ಅಳವಡಿಕೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅವರು ಮೊದಲು ವರದಿ ನೀಡಲಿ. ನಾನು ಸೂಕ್ತವಾಗಿ ನಿರ್ಧಾರ ಕೈಗೊಳ್ಳುತ್ತೇನೆ.ವ್ಯಕ್ತಿತ್ವ ವಿಕಸನ ಮಾಡುವುದೇ ಸರ್ಕಾರದ ಪ್ರಮುಖವಾದ ಗುರಿಯಾಗಿದೆ. ಆ ನಿಟ್ಟಿಯಲ್ಲಿ ಸರ್ಕಾರ ಸೂಕ್ತವಾದ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.
ಪಾವಗಡ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡುವ ಕುರಿತಂತೆ ಸೂಕ್ತವಾದ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.